ನವದೆಹಲಿ: ಗೃಹ ಸಚಿವ ಅಮಿತ್ ಶಾ ಗುರುವಾರ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಆಂತರಿಕ ಭದ್ರತೆ ಹಾಗೂ ನಕ್ಸಲ್ ಸಮಸ್ಯೆ ಕುರಿತಂತೆ ಚರ್ಚೆ ನಡೆಸಿದರು.
ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ದೋವಲ್, ಗುಪ್ತಚರ ವಿಭಾಗದ ಮುಖ್ಯಸ್ಥ ರಾಜೀವ್ ಜೈನ್, ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬ ಹಾಗೂ ಕೇಂದ್ರ ಗೃಹ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
40 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ದೇಶದಲ್ಲಿನ ಆಂತರಿಕ ಭದ್ರತಾ ಪರಿಸ್ಥಿತಿಯ ಬಗ್ಗೆ ಅಮಿತ್ ಶಾ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷವಾಗಿ ನಕ್ಸಲ್ ಪೀಡಿತ ಪ್ರದೇಶಗಳಲ್ಲಿನ ಪರಿಸ್ಥಿತಿಯ ಬಗ್ಗೆಯೂ ಅಧಿಕಾರಿಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ನಕ್ಸಲೀಯರಿಗೆ ಹಣಕಾಸೂ ಪೂರೈಸುವವರ ವಿರುದ್ಧ ಕ್ರಮ ಕೈಗೊಳ್ಳುವುದು ಸೇರಿದಂತೆ ಅವರ ನಾಯಕರ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಸಂಬಂಧ ಚರ್ಚೆ ನಡೆಯಿತು ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
44 ಜಿಲ್ಲೆಗಳನ್ನು ಮಾವೋವಾದಿ ಪೀಡಿತ ಪ್ರದೇಶಗಳ ಪಟ್ಟಿಯಿಂದ ಸರ್ಕಾರ ತೆಗೆದುಹಾಕಿದ್ದರೂ ಛತ್ತೀಸ್ ಗಡ, ಬಿಹಾರ, ಜಾಖರ್ಂಡ್ ಹಾಗೂ ಮಹಾರಾಷ್ಟ್ರದಲ್ಲಿ ಈಗಲೂ ಕೂಡಾ ನಕ್ಸಲ್ ಸಮಸ್ಯೆ ತೀವ್ರವಾಗಿದೆ ಎಂದು ಮೂಲಗಳು ಹೇಳಿವೆ.
ಕಳೆದ ತಿಂಗಳು ಛತ್ತೀಸ್ ಗಡದ ದಾಂತೇವಾಡ ಜಿಲ್ಲೆಯಲ್ಲಿ ಬಿಜೆಪಿ ಶಾಸಕ ಭೀಮಾ ಮಾಂಡವಿ ಹಾಗೂ ನಾಲ್ವರು ಭದ್ರತಾ ಸಿಬ್ಬಂದಿಯನ್ನು ನಕ್ಸಲೀಯರು ಹತ್ಯೆ ಮಾಡಿದ್ದರು. ನಂತರ ಮಹಾರಾಷ್ಟ್ರದ ಗಡ್ ಚಿರೋಲಿಯಲ್ಲಿ ಮಾವೋವಾದಿಗಳು ಸಿಡಿಸಿದ ಐಇಡಿ ಸ್ಪೋಟದಿಂದ 15 ಮಂದಿ ಭದ್ರತಾ ಸಿಬ್ಬಂದಿಗಳು ಹತ್ಯೆಯಾಗಿದ್ದರು.
ಉತ್ತಮ ಸಂಪರ್ಕಕ್ಕಾಗಿ 10 ನಕ್ಸಲ್ ಪೀಡಿತ ಜಿಲ್ಲೆಗಳಲ್ಲಿ 4, 072 ಮೊಬೈಲ್ ಟವರ್ ಸ್ಥಾಪಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 96 ಜಿಲ್ಲೆಗಳಲ್ಲಿ ಈ ಟವರ್ ಗಳ ನಿರ್ಮಾಣಕ್ಕಾಗಿ 7330 ಕೋಟಿ ಹಣ ವೆಚ್ಚ ಮಾಡಲು ಕೇಂದ್ರ ಸಚಿವ ಸಂಪುಟ ಈಗಾಗಲೇ ಮಂಜೂರಾತಿ ನೀಡಿದೆ.
ಅಮಿತ್ ಶಾ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಉಗ್ರರ ಸಮಸ್ಯೆ ಹಾಗೂ ಈಶಾನ್ಯ ಭಾಗದಲ್ಲಿನ ನಕ್ಸಲ್ ಸಮಸ್ಯೆ ಮತ್ತಿತರ ಆಂತರಿಕ ಭದ್ರತೆ ಕುರಿತಂತೆ ಅನೇಕ ಸಭೆಗಳನ್ನು ನಡೆಸಿದ್ದಾರೆ.