ಮುಳ್ಳೇರಿಯ: ದುಡಿಮೆಯೇ ಜೀವನವೆಂದು ಸಾರಿದ ಕವಿ ಕಯ್ಯಾರರ ಬದುಕು-ಬರಹಗಳು ಆದರ್ಶಮಾನವಾದುದು. ಯುವ ತಲೆಮಾರಿಗೆ ಮಾರ್ಗದರ್ಶಿಯಾಗಿರುವ ಕವಿಯ ಕಿವಿ ಮಾತುಗಳ ಸಾಕಾರತೆಗೆ ಭಾಷಾ ಪ್ರೇಮಿಗಳು ಬದ್ದರಾಗಿರಬೇಕು ಎಂದು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಮುಳ್ಳೇರಿಯ ಘಟಕದ ಅಧ್ಯಕ್ಷ .ಬಾಲಕೃಷ್ಣ ರೈ ಅವರು ತಿಳಿಸಿದರು.
ಮುಳ್ಳೇರಿಯಾದಲ್ಲಿ ಕಾರ್ಯಾಚರಿಸುತ್ತಿರುವ ಕವಿ ಕಯ್ಯಾರ ಕಿಞÂ್ಞಣ್ಣ ರೈ ಸ್ಮಾರಕ ಗ್ರಂಥಾಲಯದಲ್ಲಿ ಶನಿವಾರ ಸಂಜೆ ಆಯೋಜಿಸಲಾದ ಕವಿ ಕಯ್ಯಾರ ಕಿಞÂ್ಞಣ್ಣ ರೈ ಅವರ 104ನೇ ಜನ್ಮ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೊಸ ತಲೆಮಾರು ಓದು-ಬರಹಗಳ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ. ಆದರೆ ಅರಿವಿನ ವಿಸ್ತಾರತೆಯ ಬೆಳವಣಿಗೆಗೆ ಪೂರಕವಾಗಿ ಪುಸ್ತಕ ಜ್ಞಾನಕ್ಕಿಂತ ಮಿಗಿಲಾದ ಜ್ಞಾನ ಸಮುದ್ರವನ್ನು ಬೇರೆಡೆಯಿಂದ ಗಳಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು. ದಿ.ಕಯ್ಯಾರರು ಹೊಂದಿದ್ದ ಭಾಷಾಭಿಮಾನದ ಮೇರು ವ್ಯಕ್ತಿತ್ವ ಅನುಸರಣೀಯ ತುರ್ತು ಆಗಬೇಕಾದ ಕಾರ್ಯವಾಗಿದೆ ಎಂದ ಅವರು ಕೃಷಿಕರಾಗಿ, ಆದರ್ಶ ಶಿಕ್ಷಕರಾಗಿ, ಕನ್ನಡ ಪರ ಹೋರಾಟಗಾರರಾಗಿ, ಸಾಹಿತ್ಯ ಪ್ರೇಮಿಯಾಗಿ ಬಹುಮುಖ ವ್ಯಕ್ತಿತ್ವದ ಕಯ್ಯಾರ ಅಧ್ಯಯನ ಕೇಂದ್ರ ರಚನೆಗೆ ಕಾಸರಗೋಡಿನಲ್ಲಿ ವ್ಯವಸ್ಥೆಗೊಳಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಸಮಾರಂಭವನ್ನು ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಕಾರ್ಯದರ್ಶಿ, ಪತ್ರಕರ್ತ ಪುರುಷೋತ್ತಮ ಭಟ್ ಕೆ ಉದ್ಘಾಟಿಸಿ, ಕವಿ ಕಯ್ಯಾರರ ಕೃತಿಗಳ ಮರು ಓದಿನ ಜೊತೆಗೆ ಅಲ್ಲಿ ಬಿತ್ತಲಾದ ಬದುಕು-ಕಾವ್ಯ-ಹೋರಾಟಗಳ ಸಾಕಾರತೆಗೆ ಕಾಲ ಪಕ್ವಗೊಳ್ಳುತ್ತಿದೆ ಎಂದು ತಿಳಿಸಿದರು.
ಹಿರಿಯ ನಿವೃತ್ತ ಶಿಕ್ಷಕ ಗೋಪಾಲಕೃಷ್ಣ ಭಟ್ ಮುಳ್ಳೇರಿಯ, ಶಿಕ್ಷಕ ಮಹಾಲಿಂಗೇಶ್ವರ ಭಟ್, ಕೃಷ್ಣನ್, ಸತ್ಯಶಂಕರ ಭಟ್ ಮೊದಲಾದವರು ಮಾತನಡಿ, ಕವಿ ಕಯ್ಯಾರ ಬದುಕು-ಸಾಧನೆಗಳ ಬಗ್ಗೆ ನೆನಪಿಸಿದರು.
ಗ್ರಂಥಾಲಯದ ಕಾರ್ಯದರ್ಶಿ ಕೆ.ಮೋಹನನ್ ಮಾಸ್ತರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗ್ರಂಥಪಾಲಕಿ ಸಾವಿತ್ರಿ ಎಂ. ವಂದಿಸಿದರು.