ಬದಿಯಡ್ಕ: ಪ್ರತಿಭೆ ಮತ್ತು ದೈವಾನುಗ್ರಹಗಳಿದ್ದರೆ ಅದೃಷ್ಟದ ಬಾಗಿಲು ತನ್ನಿಂದ ತಾನೆ ತೆರೆದುಕೊಳ್ಳುತ್ತದೆ ಎಂಬುದಕ್ಕೆ ನಿದರ್ಶನವೆಂಬಂತೆ ಬದಿಯಡ್ಕ ಪೆರಡಾಲ ಕೊರಗ ಕಾಲನಿಯ ಪುಟಾಣಿಯೊಬ್ಬನ ಬದುಕು ಅದೃಷ್ಟದೊಂದಿಗೆ ತೆರೆದುಕೊಂಡಿದ್ದು, ಜಿಲ್ಲೆಯ ಹೆಸರನ್ನು ಗುರುತಿಸುವಂತೆ ಮಾಡಿದೆ.
ಪೆರಡಾಲ ಕೊರಗ ಕಾಲನಿಯ ವಿಜಯ ಎಂಬ ಬಾಲಕ ಪುಲ್ಲಾಂಜಿ(ಅರ್ಥ: ಸಾಧಾರಣವಾಗಿ ಕಾಣಸಿಗುವ ನಿರುಪಯುಕ್ತ ಮದ್ದಿನ ಗಿಡ-ಪಾರ್ಥೇನಿಯಂ-ಕಮ್ಯುನಿಸ್ಟ್ ಗಿಡದಂತಿರುವುದು) ಎಂಬ ಮಲೆಯಾಳ ಕಿರುಚಿತ್ರದಲ್ಲಿ ಅಭಿನಯಿಸಿ ಅತ್ಯುತ್ತಮ ಬಾಲನಟ ಪ್ರಶಸ್ತಿಗೆ ಅರ್ಹನಾಗಿದ್ದಾನೆ. ಅಭಿನಯದ ಗಂಧಗಾಳಿಯೂ ಇಲ್ಲದ ನಾಲ್ಕರ ಹರೆಯದ ಬಾಲಕ ಸಿನಿಮಾದಲ್ಲಿ ಪಾತ್ರಕ್ಕೆ ಜೀವ ತುಂಬಿ ಪ್ರೇಕ್ಷಕರನ್ನು ಆಶ್ಚರ್ಯಚಕಿತಗೊಳಿಸಿದ್ದಾನೆ.
ಗಿರೀಶ್ ಮಕ್ರೇರಿ ರಚಿಸಿ ನಿರ್ದೇಶಿಸಿ, ವಿನೋದ್ ಕೋಯಿಪರಂಬತ್ತ್‍ರವರ ನಿರ್ಮಾಣದಲ್ಲಿ ಹೊರ ಬಂದ ಪುಲ್ಲಾಂಜಿ ಎಂಬ ಕಿರುಚಿತ್ರದಲ್ಲಿ ಅಭಿನಯಿಸುವ ಮೂಲಕ ಎರಡು ಫೆಸ್ಟಿವ್‍ಗಳಿಂದ ಜೋಡಿ ಪ್ರಶಸ್ತಿಗಳು ಈ ಕಿರುಚಿತ್ರಕ್ಕೆ ಲಭ್ಯವಾಗಿದೆ. ಪಾಲಕ್ಕಾಡ್‍ನಲ್ಲಿ ಇತ್ತೀಚೆಗೆ ಜರಗಿದ ಲೀಡ್ ಅಂತರಾಷ್ಟ್ರೀಯ ಶೋರ್ಟ್ ಫಿಲಂ ಫೆಸ್ಟಿವಲ್ ಹಾಗೂ ಎರ್ನಾಕುಳಂನಲ್ಲಿ ನಡೆದ ಐ.ಎಸ್.ಟಿ.ಎ. ಅಂತರಾಷ್ಟ್ರೀಯ ಶೋರ್ಟ್ ಫಿಲಂ ಫೆಸ್ಟಿವಲ್ ಎಂಬ ಎರಡು ಸ್ಪರ್ಧೆಗಳಲ್ಲೂ ಪುಲ್ಲಾಂಜಿಗೆ ಪ್ರಶಸ್ತಿ ನೀಡಲಾಯಿತು.
ವಿಜಯನ ಅಕ್ಕ ರೇಖಾಳೂ ಇದೇ ಸಿನಿಮಾದಲ್ಲಿ ಅಭಿನಯಿಸಿದ್ದಾಳೆ. 20 ನಿಮಿಷ ಆಭಿನಯದಲ್ಲಿ ಹಸಿವಿನ ಯಾತನೆಯನ್ನು, ಬಡತನದ ಕರಾಳತೆಯ ಮಧ್ಯೆ ರಾಜಕೀಯ ನಿರ್ಲಕ್ಷ್ಯ, ದುರಾಡಳಿತ, ಪ್ರಜಾಪ್ರಭುತ್ವದ ಅಣಕಗಳನ್ನು ಬಿಂಬಿಸುವ ಈ ಕಿರುಚಿತ್ರ ಕಣ್ಣಾಲಿಗಳನ್ನು ಆರ್ಧಗೊಳಿಸಿ ಸತ್ಯವನ್ನು ತೆರೆದಿಡುತ್ತದೆ ಎಂದು ಎಂದು ಕಿರುಚಿತ್ರ ಪ್ರಶಸ್ತಿ ನಿರ್ಣಾಯಕರ ಸಮಿತಿಯ ಅಧ್ಯಕ್ಷ ಉದಯ ಶಂಕರ್ ಅಭಿಪ್ರಾಯ ವ್ಯಕ್ತಪಡಿಸಿರುವರು.
ವಿಶ್ವ ಕಿರುಚಿತ್ರ ಸ್ಪರ್ಧೆಯಾದ ಕಾರ್ಲ್ ಫೆಸ್ಟಿವಲ್ ಪುಲ್ಲಾಂಜಿಯ ಅಪೇಕ್ಷೆಯನ್ನು ಸ್ವೀಕರಿಸುವ ಜೊತೆಗೆ 17 ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಕಿರು ಚಿತ್ರ ಸ್ಪರ್ಧೆಗಳಲ್ಲಿ 30 ರಷ್ಟು ಅವಾರ್ಡ್‍ಗಳು ಪುಲ್ಲಾಂಜಿಯನ್ನು ಹುಡುಕಿ ಬಂದಿದೆ.
ಅತ್ಯುತ್ತಮ ಕಿರುಚಿತ್ರದ ಹೊರತಾಗಿ ಬಾಲನಟ, ನಿರ್ದೇಶನ, ರಚನೆ, ಛಾಯಾಗ್ರಹಣ, ಎಡಿಟಿಂಗ್ ಮೊದಲಾದವುಗಳಿಗೆ ಪುರಸ್ಕಾರ ಲಭಿಸಿದೆ. ಎರ್ನಾಕುಳಂನಲ್ಲಿ ನಡೆದ ಅವಾರ್ಡ್ ನೈಟ್‍ನಲ್ಲಿ ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಫಲಕವನ್ನು ಮಲೆಯಾಳ ಸಿನಿಮಾ ನಟಿ ಮಂಜು ವಾರಿಯರ್ ಹಸ್ತಾಂತರಿಸಿದರು.
50000 ರೂಪಾಯಿ ಇಫ್‍ಟ್ ಆವಾರ್ಡ್ ಗಳಿಸಿದ ಪುಲ್ಲಾಂಜಿ:
ಪೆರಡಾಲ ಕೊಲನಿಯಂತಹ ಹಿಂದುಳಿದ ಪ್ರದೇಶವನ್ನು ಅಯ್ದು, ಅಲ್ಲಿನ ಜನರ ಭವಣೆಗಳನ್ನು ಕಿರುಚಿತ್ರದಲ್ಲಿ ಬಿಂಬಿಸುವ ಮೂಲಕ ಬಡವರ ಬದುಕಿನತ್ತ ಬೆಳಕ ಚೆಲ್ಲುವ ಪ್ರಯತ್ನ ಮಾಡಿರುವುದು ಮಹತ್ಕಾರ್ಯವಾಗಿದೆ. ಎರ್ನಾಕುಳಂನಲ್ಲಿ ನಡೆದ ಇಫ್‍ಟ್ ಇಂಟರ್‍ನೇಶನಲ್ ಶೋರ್ಟ್ ಫಿಲಿಂ ಫೆಸ್ಟಿವಲ್‍ನಲ್ಲಿ ಆವಾರ್ಡ್ ಫೆಸ್ಟಿವಲ್‍ನಲ್ಲಿ ಪುಲ್ಲಾಂಜಿ 50000ಸಾವಿರ ರೂಪಾಯಿ ವಿಶೇಷ ಇಫ್‍ಟ್ ಆವಾರ್ಡ್ ಮತ್ತು ಇತರ ನಾಲ್ಕು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಶ್ರೇಷ್ಠ ನಿರ್ದೇಶಕ ಪುರಸ್ಕಾರ ಗಿರೀಶ್ ಮಕ್ರೇರಿ ಆವರಿಗೆ ಲಭಿಸಿದರೆ ಪ್ರಜಿ ಉತ್ತಮ ಛಾಯಾಗ್ರಾಹಕ, ವಿಷ್ಣು ಬೆಸ್‍ಟ್ ಸಂಪಾದಕ, ಹಾಗೂ ಬಾಲನಟನಾಗಿ ವಿಜಯ ಪುರಸ್ಕಾರ ಗಳಿಸುವ ಮೂಲಕ ಹಿಂದುಳಿದ ಪ್ರದೇಶದಲ್ಲಿನ ಕತೆಯನ್ನಾದರಿಸಿದ ಕಿರುಚಿತ್ರವೊಂದು ಉನ್ನತ ಮಟ್ಟದಲ್ಲಿ ಸದ್ದು ಮಾಡಿರುವುದು ವಿಶೇಷತೆಯಾಗಿ ಗುರುತಿಸಿಕೊಂಡಿದೆ.
ನಾಲ್ಕರ ಹರೆಯದ ಪುಟಾಣಿ ವಿಜಯನ ಭವಿಷ್ಯದ ಬಾಗಿಲು ಈ ಕಿರುಚಿತ್ರದ ಮೂಲಕ ತೆರೆದುಕೊಳ್ಳುವ ಸಾಧ್ಯತೆ ನಿಚ್ಚಳವಾಗಿದ್ದು ಹಿರಿಯ ಕಲಾಪೋಷಕರ, ಪ್ರೇಮಿಗಳ ಪ್ರೋತ್ಸಾಹ ಅಗತ್ಯವಿದೆ.