ಕಾಸರಗೋಡು: ಕಳೆದ ಸಹಕಾರಿ ಠೇವಣಿ ಸಂಗ್ರಹಣೆಯಲ್ಲಿ ಕಾಸರಗೋಡು ಸರ್ವೀಸಸ್ ಕೋ- ಆಪರೇಟಿವ್ ಬ್ಯಾಂಕ್ ತಾಲೂಕಿನಲ್ಲಿ ಅತೀ ಹೆಚ್ಚು ಠೇವಣಿ ಸಂಗ್ರಹಿಸಿ ಪ್ರಥಮ ಸ್ಥಾನ ಪಡೆದಿದೆ. 2018-19ರಲ್ಲಿ ಬ್ಯಾಂಕಿಗೆ ಐಎಸ್‍ಒ 9001-2015 ಅಂಗೀಕಾರ ಲಭಿಸಿದೆ. 100 ಕೋಟಿಗೂ ಹೆಚ್ಚು ಠೇವಣಿ ಹೊಂದಿರುವ ಬ್ಯಾಂಕ್ ಜಿಲ್ಲೆಯಲ್ಲಿ ಅತೀ ಉನ್ನತ ಸ್ಥಾನವನ್ನು ಹೊಂದಿದೆ.
ಬ್ಯಾಂಕ್‍ನ ಸಭಾಂಗಣದಲ್ಲಿ ಜರಗಿದ ಠೇವಣಿ ಸಂಗ್ರಹಣಾ ಮಾಸಾಚರಣೆಯಲ್ಲಿ ಅತೀ ಹೆಚ್ಚು ಠೇವಣಿ ಸಂಗ್ರಹಿಸಿದ ಮೆನೇಜರ್ ಎಂ.ಅಶೋಕ ರೈ ಅವರನ್ನು ಬ್ಯಾಂಕ್ ವತಿಯಿಂದ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ಎಸ್.ಜೆ.ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಕೆ.ಜಯಚಂದ್ರನ್, ಪಿ.ದಾಮೋದರನ್, ಮೊಹಮ್ಮದ್ ಹನೀಫ್, ಕೆ.ಬಾಲಚಂದ್ರನ್, ಆನಂದ ಎ. ಶುಭಹಾರೈಸಿದರು. ಕಾರ್ಯದರ್ಶಿ ಎಂ.ಸುಮತಿ ಸ್ವಾಗತಿಸಿ, ಎಂ.ಅಶೋಕ ರೈ ವಂದಿಸಿದರು.