ಬದಿಯಡ್ಕ: ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ದಿ. ಪಿ.ಎನ್ ಪಣಿಕ್ಕರ್ ಸಂಸ್ಮರಣಾ ದಿನವಾದ ಬುಧವಾರದಿಂದ ಪ್ರಾರಂಭವಾದ ವಾಚನ ಪಕ್ಷಾಚರಣೆಯನ್ನು ಸಮಾಜ ಮಂದಿರದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾ.ಪಂ. ಸದಸ್ಯೆ ಶೈಲಜಾ ನಡುಮನೆ ಅವರು ಬುಧವಾರ ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ ದಿ. ಪಿ.ಎನ್ ಪಣಿಕ್ಕರ್ ಅವರು ಅನಕ್ಷರತೆಯ ವಿರುದ್ಧ ಹೋರಾಡಿದ ಮಹಾನ್ ವ್ಯಕ್ತಿ. ಗ್ರಂಥಾಲಯಗಳ ಜನಕ ಎಂದು ಸ್ಮರಿಸಿದರು. ಪಣಿಕ್ಕರ್ ಅವರ ನೆನಪಿನಲ್ಲಿ ನೀಡುತ್ತಿರುವ ಪುರಸ್ಕಾರಗಳ ಬಗ್ಗೆ ತಿಳಿಸಿದರು.
ಡಾ.ಮೋಹನ್ ಕುಮಾರ್ ವೈಎಸ್ ಅವರು ಮಾತನಾಡಿ ಓದುವಿಕೆಯ ಮಹತ್ವವನ್ನು ವಿವರಿಸಿದರು. ಡಾ. ವೇಣುಗೋಪಾಲ್ ಕಳೆಯತ್ತೋಡಿ ಮಾತನಾಡಿ ಓದುಗರ ಅಭಿರುಚಿಗೆ ತಕ್ಕಂತೆ ಹೇಗೆ ಪುಸ್ತಕಗಳನ್ನು ಆಯ್ಕೆ ಮಾಡಬಹುದು ಎನ್ನುವುದನ್ನು ಸ್ವಾನುಭವದಿಂದ ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಗ್ರಂಥಾಲಯದ ಅಧ್ಯಕ್ಷ ಕೆ.ನರಸಿಂಹ ಭಟ್ ಅವರು ಪಿ. ಎನ್ ಪಣಿಕ್ಕರ್ ಸಂಸ್ಮರಣಾ ಭಾಷಣ ಮಾಡಿದರು. ಪಣಿಕ್ಕರ್ ಅವರ ಜೀವಿತಾವಧಿಯ ಸಾಧನೆಗಳನ್ನು ತಿಳಿಸಿದರು. ವೈ.ವಿ ಸುಬ್ರಹ್ಮಣ್ಯ ಸ್ವಾಗತಿಸಿ, ಕಾರ್ಯದರ್ಶಿ ಕೆ.ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಗಣರಾಜ ಕೆ ವಂದಿಸಿದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಕೆ.ಎಸ್.ನ ನೆನಪಿನ ಕಾವ್ಯ ಪುರಸ್ಕಾರ ಪಡೆದ ಅಧ್ಯಕ್ಷರನ್ನು ಗೌರವಿಸಲಾಯಿತು.