HEALTH TIPS

ಭವಿಷ್ಯದ ಕನಸಿದ್ದಾಗ ಸಂಸ್ಥೆಯು ಬೆಳಗುತ್ತದೆ - ಪದ್ಮನಾಭ ಕೋಂಕೋಡಿ

                   ಪೆರಡಾಲ ಸೇವಾ ಸಹಕಾರಿ ಬ್ಯಾಂಕ್‍ನ ಶತಮಾನೋತ್ಸವ ಸಮಾರೋಪ ಸಭೆಯಲ್ಲಿ
      ಬದಿಯಡ್ಕ: ಕನಸುಗಳಿದ್ದವರು ಸಹಕಾರಿ ಕ್ಷೇತ್ರದ ನೇತೃತ್ವವನ್ನು ವಹಿಸಿಕೊಂಡಾಗ ಆ ಸಂಸ್ಥೆ ಬೆಳಗುತ್ತದೆ. ಸಂಸ್ಥೆಯೊಂದರ ಬೆಳವಣಿಗೆಯ ಹಿಂದೆ ವ್ಯವಹಾರಗಳನ್ನು ಮೀರಿದ  ಸೇವ ತತ್ಪರತೆಯ ಸಾಧನೆ ಇದೆ. ಸಮಾಜಮುಖಿ ಚಿಂತನೆಗಳ ಒಟ್ಟಂದದ ಸಮೀಕರಣವಾಗಿ ಸಹಕಾರಿ ಕ್ಷೇತ್ರ ಬೆಳೆದುಬಂದಿದೆ ಎಂದು ಸಹಕಾರ ಭಾರತಿಯ ಅಖಿಲ ಭಾರತ ಸಹ ಸಂಘಟನಾ ಕಾರ್ಯದರ್ಶಿ ಕೋಂಕೋಡಿ ಪದ್ಮನಾಭ ತಿಳಿಸಿದರು.
  ಶನಿವಾರ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆದ ಪೆರಡಾಲ ಸೇವಾ ಸಹಕಾರಿ ಬ್ಯಾಂಕ್‍ನ ಶತಮಾನೋತ್ಸವ ಸಮಾರಂಭದ ಸಮಾರೋಪ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
    ಸಹಕಾರಿ ಕ್ಷೇತ್ರಕ್ಕೆ ಯಾವುದೇ ರಾಜ್ಯ ಸರಕಾರವಾಗಲಿ, ಕೇಂದ್ರ ಸರಕಾರವಾಗಲಿ ಬೆಂಬಲವನ್ನು ನೀಡುತ್ತಿಲ್ಲ. ಆದುದರಿಂದ ಸಹಕಾರಿ ಕ್ಷೇತ್ರವು ಸಂಕಷ್ಟದ ಮಧ್ಯೆ ಬೆಳೆಯಬೇಕಾಗಿದೆ. ಸಹಕಾರ ಭಾರತಿಯ ಸದಸ್ಯರ ನೇತೃತ್ವದಲ್ಲಿ ಈ ಎಲ್ಲ ಅಡೆತಡೆಗಳನ್ನು ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ಮೀರಿ ನಿಂತಿದೆ ಎಂದು ಅಭಿಮಾನದಿಂದ ಹೇಳಬಹುದಾಗಿದೆ. ದೇಶದಲ್ಲಿರುವ ಒಂದೇ ಒಂದು ಸ್ವಯಂಸೇವಾ ಸಂಘಟನೆ ಸಹಕಾರ ಭಾರತಿಯಾಗಿದೆ ಎಂದರು.
ಪೆರಡಾಲ ಸೇವಾ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷ ಜಯದೇವ ಖಂಡಿಗೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸದಸ್ಯರು, ನೌಕರರು, ಗ್ರಾಹಕರು ಪರಸ್ಪರ ಸಹಕಾರ ಮನೋಭಾವದಿಂದ ಮುಂದುವರಿದರೆ ಸಹಕಾರಿ ಸಂಸ್ಥೆಗಳು ಪ್ರಗತಿಯನ್ನು ಕಾಣುತ್ತದೆ. ನೀರ್ಚಾಲು ಪರಿಸರದಲ್ಲಿ ಪರಸ್ಪರ ಸಹಕಾರೀ ಮನೋಭಾವದೊಂದಿಗೆ ಮುಂದುವರಿಯುವ ಉತ್ತಮ ಮನಸ್ಸುಗಳಿವೆ ಎಂಬುದು ನಮಗೆ ಹೆಮ್ಮೆಯಾಗಿದೆ ಎಂದರು.
    ಸಹಕಾರ ಭಾರತಿಯ ಅಖಿಲ ಭಾರತ ಕಾರ್ಯದರ್ಶಿ ನ್ಯಾಯವಾದಿ ಕರುಣಾಕರನ್ ನಂಬ್ಯಾರ್ ಮಾತನಾಡಿ, ಸೇವೆಯ ಮೂಲಕ ಬೆಳೆಯುತ್ತಿರುವ ಸಹಕಾರಿ ಕ್ಷೇತ್ರವು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದು ಬದಲಾವಣೆಯ ಕಾಲಘಟ್ಟದಲ್ಲಿದೆ. ಗ್ರಾಮದ ಅಭಿವೃದ್ಧಿಯಲ್ಲಿ ಸಹಕಾರೀ ಸಂಸ್ಥೆಗಳು ಪ್ರಧಾನ ಪಾತ್ರವಹಿಸುತ್ತಿದ್ದರೂ ಇದಕ್ಕೆ ಸರಕಾರವಾಗಲಿ, ಕಾನೂನಾತ್ಮಕವಾದ ಬೆಂಬಲ ಲಭಿಸುತ್ತಿಲ್ಲವೆಂಬುದು ಖೇದಕರ ವಿಚಾರವಾಗಿದೆ. ಅಮಿತವಾದ ನಿಯಂತ್ರಣಗಳನ್ನು ಏರ್ಪಡಿಸಿರುವುದರಿಂದ ಸಹಕಾರೀ ಸಂಸ್ಥೆಗಳು ನಿರೀಕ್ಷೆಯ ಮೈಲುಗಲ್ಲನ್ನು ಸಾಧಿಸಲು ಅಸಾಧ್ಯವಾಗಿದೆ. ಸಂಕಷ್ಟಗಳ ಮಧ್ಯೆಯೂ ಶತಮಾನೋತ್ಸವವನ್ನು ಪೂರೈಸುತ್ತಿರುವುದು ಅತಿದೊಡ್ಡ ಸಾಧನೆಯಾಗಿದೆ ಎಂದರು.
ಬ್ಯಾಂಕ್‍ನ ಸದಸ್ಯರಿಗಿರುವ ಗ್ರೂಪ್ ಇನ್ಶೂರೆನ್ಸ್ ಯೋಜನೆಯನ್ನು ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್‍ನ ವಿಭಾಗ ಪ್ರಬಂಧಕ ಹರೀಶ್ ಕುಮಾರ್ ಅವರು ಪೆರುಮುಂಡ ಶಂಕರನಾರಾಯಣ ಭಟ್ ಅವರಿಗೆ ನೀಡಿ ಉದ್ಘಾಟಿಸಿದರು. ಸಹಕಾರ ಭಾರತಿಯ ಕಾಸರಗೋಡು ಜಿಲ್ಲಾ ಅಧ್ಯಕ್ಷ ಗಣಪತಿ ಕೋಟೆಕಣಿ ಶುಭಾಶಂಸನೆಗೈದರು. ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷ ಎಂ. ಸಂಜೀವ ಶೆಟ್ಟಿ, ನೀರ್ಚಾಲು ಕೆ.ಎ.ಸಿ.ಯಂ. ಸೊಸೈಟಿಯ ಅಧ್ಯಕ್ಷ ಪದ್ಮರಾಜ ಪಟ್ಟಾಜೆ, ನೀರ್ಚಾಲು ಕ್ಷೀರೋತ್ಪಾದಕ ಸಹಕಾರಿ ಸಂಘದ ಅಧ್ಯಕ್ಷ ಉದನೇಶ ವೀರ, ಕೆ.ವಿ.ವಿ.ಇ.ಎಸ್.ಬದಿಯಡ್ಕ ಘಟಕ ಅಧ್ಯಕ್ಷ ಮುಹಮ್ಮದ್ ಹಾಜಿ ಕುಂಜಾರು, ಕೆ.ವಿ.ವಿ.ಇ.ಎಸ್. ನೀರ್ಚಾಲು ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಎಂ., ಬ್ಯಾಂಕ್‍ನ ಕಾರ್ಯದರ್ಶಿ ಅಜಿತ ಕುಮಾರಿ ಉಪಸ್ಥಿತರಿದ್ದು ಶುಭ ಹಾರೈಸಿದರು. ನೂತನ ಕಟ್ಟಡ ವಾಸ್ತುಶಿಲ್ಪಿ, ಅಭಿಯಂತರ ಕೆ.ಎನ್.ಭಟ್ ಬದಿಯಡ್ಕ, ಕಟ್ಟಡದ ಗುತ್ತಿಗೆದಾರ ರಾಜು ಸ್ಟೀಫನ್ ಕ್ರಾಸ್ತ ಬೇಳ ಅವರಿಗೆ ಗೌರವಾರ್ಪಣೆ ಮಾಡಲಾಯಿತು. ಸಂಸ್ಥೆಯ ಅಭಿವೃದ್ಧಿಗೆ ಪೂರಕವಾಗಿ ದುಡಿದ ಜಯರಾಮ ಶಾನುಭೋಗ್, ಮಾಜಿ ಅಧ್ಯಕ್ಷರುಗಳಾದ ವಾಶೆ ಶ್ರೀಕೃಷ್ಣ ಭಟ್ ಹಾಗೂ ಕೋರಿಕ್ಕಾರು ವಿಷ್ಣು ಭಟ್, ಸಿಬ್ಬಂದಿ ವರ್ಗದವರಾದ ಸುಬ್ರಹ್ಮಣ್ಯ ಭಟ್ ಪುದುಕೋಳಿ, ವಿಶ್ವನಾಥ ಭಟ್ ಕೆ., ಶ್ರೀಕೃಷ್ಣ ಭಟ್ ವಳಕ್ಕುಂಜ, ವೆಂಕಟ್ರಮಣ ಭಟ್ ಬರ್ಲ, ಶಂಕರ ಭಟ್ ಬೊಳುಂಬು, ರಾಮನಾಯ್ಕ ಸರಳಿ ಕುಂಟಿಕಾನ ಹಾಗೂ ಕರ್ನಾಟಕ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಪ್ರಥಮ ರ್ಯಾಂಕ್ ವಿಜೇತ ವಿದ್ಯಾರ್ಥಿ ಶ್ರೀಕೃಷ್ಣ ಶರ್ಮ ಕಡಪ್ಪು ಅವರನ್ನು ಸನ್ಮಾನಿಸಲಾಯಿತು. ಕರಿಂಬಿಲ ಲಕ್ಷ್ಮಣ ಪ್ರಭು ಸ್ವಾಗತಿಸಿ, ಶಂಕರನಾರಾಯಣ ಶರ್ಮ ನಿಡುಗಳ ವಂದಿಸಿದರು. ಪ್ರಾರಂಭದಲ್ಲಿ ಶ್ರೀಪತಿ ಪೆರ್ವ ಸ್ತುತಿಯನ್ನು ಹಾಡಿದರು. ರವಿಕಾಂತ ಕೇಸರಿ ಕಡಾರು ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries