HEALTH TIPS

ಕನ್ನಡ ನಾಟಕ ರಂಗಭೂಮಿಯನ್ನು ವಿಶ್ವ ಮಟ್ಟಕ್ಕೇರಿಸಿದ ಮೇರು ನಟ- ರಂಗತಜ್ಞ. ಸಾಹಿತಿ ಕಾರ್ನಾಡ್ : ಕಾಸರಗೋಡು ಚಿನ್ನಾ


      ಕಾಸರಗೋಡು: ಕನ್ನಡ ನಾಟಕ ಸೃಷ್ಟಿಯಲ್ಲಿ ತನ್ನ ವಿನೂತನ ತಂತ್ರವನ್ನು ಬಳಸಿ ಹೊಸ ಮನ್ವಂತರ ಆರಂಭಿಸಿದ ರಂಗ ತಜ್ಞ ಡಾ.ಗಿರೀಶ್ ಕಾರ್ನಾಡ್ ಪುರಾಣ, ಐತಿಹಾಸಿಕ ಘಟನೆಗಳಿಗೆ ಆಧುನಿಕ ಸ್ಪರ್ಶ ನೀಡಿ ನೂತನ ನಾಟಕ ಪ್ರಕಾರವನ್ನಾಗಿ ಸೃಜಿಸಿ ಅದಕ್ಕೆ ಜೀವ ತುಂಬಿದ ಖ್ಯಾತ ಸಾಹಿತಿ ಎಂದು ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ, ಹಿರಿಯ ರಂಗಕರ್ಮಿ, ಸಿನೆಮಾ ಕಲಾವಿದ ಕಾಸರಗೋಡು ಚಿನ್ನಾ ಅವರು ಹೇಳಿದರು.
     ಅವರು ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಕನ್ನಡ ಅಧ್ಯಾಪಕ ಭವನದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ ಡಾ.ಗಿರೀಶ್ ಕಾರ್ನಾಡ್ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿದರು.
     ತಾರುಣ್ಯದಲ್ಲಿಯೇ ತಮ್ಮ ಹೊಸ ಆವಿಷ್ಕಾರದಿಂದ ಕನ್ನಡ ನಾಟಕ ಸಾಹಿತ್ಯ ಚರಿತ್ರೆಯಲ್ಲಿಯೇ ಹೊಸ ಅಧ್ಯಾಯ ತೆರೆದ ನಾಟಕಕಾರ. ರಂಗಭೂಮಿಯಲ್ಲಿ ಅದನ್ನು ಅಭೂತಪೂರ್ವವಾಗಿ ಪ್ರದರ್ಶಿಸಿ ನಾಟಕವನ್ನು ಅಸಂಖ್ಯಾತ ಪ್ರೇಕ್ಷಕ ಲೋಕ ಮನಸಾ ಮೆಚ್ಚಿ, ಅವರನ್ನು ಮಂತ್ರಮುಗ್ಧಗೊಳಿಸಿದ ಬಹುಭಾಷಾ ರಂಗತಜ್ಞ. ಯಯಾತಿಯಿಂದ ಮೊದಲ್ಗೊಂಡು ಇವರಿಂದ ಸೃಷ್ಟಿಸಲ್ಪಟ್ಟಿರುವ ತುಘಲಕ್, ಹಯವದನ, ನಾಗಮಂಡಲ, ತಲೆದಂಡ, ಅಗ್ನಿ ಮತ್ತು ಮಳೆ, ಹಿಟ್ಟಿನ ಹುಂಜ, ಈಡಿಪಸ್ ಮೊದಲಾದವು ಇದಕ್ಕೆ ಜ್ವಲಂತ ನಿದರ್ಶನ. ಕೆಲವು ವಿಷಯಗಳಲ್ಲಿ ತನಗೆ ಹಾಗು ಹಲವರಿಗೆ ಅವರ ಕುರಿತು ಅಭಿಪ್ರಾಯ ವ್ಯತ್ಯಾಸವಿದ್ದರೂ ಸಾಹಿತ್ಯ ಲೋಕಕ್ಕೆ, ಕಲಾರಂಗಕ್ಕೆ  ಅವರು ನೀಡಿದ ಅಸಾಧಾರಣ ಕೊಡುಗೆಯನ್ನು ಯಾರೂ ಅಲ್ಲಗಳೆಯಲು ಸಾಧ್ಯವೇ ಇಲ್ಲ. ನಿಜಕ್ಕೂ ಡಾ.ಗಿರೀಶ್ ಕಾರ್ನಾಡ್ ಕನ್ನಡ ರಂಗಭೂಮಿಯನ್ನು ಶ್ರೀಮಂತಗೊಳಿಸಿ ವಿಶ್ವಮಟ್ಟಕ್ಕೇರಿಸಿದ ಮೇರು ನಟ, ರಂಗತಜ್ಞ, ಬಹುಭಾಷಾ ಪಾರಂಗತ, ಹಿರಿಯ ಸಾಹಿತಿ, ಪ್ರಖ್ಯಾತ ಸಿನೆಮಾ ಕಲಾವಿದ, ನಿರ್ದೇಶಕರೂ ಹೌದು ಎಂದರು.
      ಕಥೆಗಾರ, ಚಿಂತಕ ಶಶಿ ಭಾಟಿಯಾ ಕಾರ್ನಾಡರ ಆತ್ಮ ಚರಿತ್ರೆಯಲ್ಲಿ ಉಲ್ಲೇಖಿಸಲ್ಪಟ್ಟ ಕೆಲವು ಘಟನೆಗಳನ್ನು ವಿವರಿಸಿದರು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಸಾಲಿಯಾನ್, ಹಿರಿಯ ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಾಸುಮ ಕೊಡಗು, ಸಹಪ್ರಾಧ್ಯಾಪಕ ಡಾ|ರತ್ನಾಕರ ಮಲ್ಲಮೂಲೆ, ಲೇಖಕ ಸುಕುಮಾರ ಆಲಂಪಾಡಿ ಮೊದಲಾದವರು ಮಾತನಾಡಿ ಶ್ರದ್ಧಾಂಜಲಿ ಸಲ್ಲಿಸಿದರು.
     ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ವಿ.ಭಟ್ ಮಾತನಾಡಿ ನಾಟಕ ಕ್ಷೇತ್ರದಲ್ಲಿ ಮಿಂಚಿದ್ದು ಮಾತ್ರವಲ್ಲ, ಸಿನೆಮಾ ರಂಗ, ವಿದ್ವತ್ಪೂರ್ಣವಾದ ಸಂವಾದ, ವಿಚಾರಗೋಷ್ಠಿಗಳಲ್ಲಿ ಅನುಪಮರಾಗಿ ಮೆರೆದವರು. ತಮ್ಮ ಸಿದ್ಧಾಂತ ಪ್ರತಿಪಾದನೆ ಕೆಲವೊಮ್ಮೆ ಅತಿಯಾಗಿ ಸಮಾಜದ ಹಲವರ ನಿಷ್ಠುರಕ್ಕೆ, ವೈಮನಸ್ಸಿಗೆ ಕಾರಣರಾದುದೂ ಉಂಟು. ಆದರೂ ಕನ್ನಡದ ಕೀರ್ತಿಯೂ ಜಗತ್ತಿನಾದ್ಯಂತ ಬೆಳಗಿಸಿದ ಅದ್ವಿತೀಯ ಸಾಧಕ, ಅನುಪಮ ಕನ್ನಡ ಪ್ರೇಮಿ ಎಂದರು.
      ಅಂತರಾಷ್ಟ್ರೀಯ ಬೊಂಬೆಯಾಟ  ನಿರ್ದೇಶಕ ಕೆ.ವಿ.ರಮೇಶ್, ಎಂ.ಶಶಿಕಲಾ ಟೀಚರ್, ಬಾಲಕೃಷ್ಣ ಮಾಸ್ತರ್, ವಿರೂಪಾಕ್ಷ ಹೊಸದುರ್ಗ, ಹರಿಣಾಕ್ಷಿ, ನಾರತಿ, ಶ್ರೀಕಾಂತ್ ಮೊದಲಾದವರು ಉಪಸ್ಥಿತರಿದ್ದರು. ಪರಿಷತ್ತಿನ ಪದಾ„ಕಾರಿ ಸುಬ್ಬಣ್ಣ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ರಾಮಚಂದ್ರ ಭಟ್ ಪಿ. ವಂದಿಸಿದರು.
                 (ಚಿತ್ರ ಮಾಹಿತಿ : ಎಸ್.ವಿ.ಭಟ್ ಮಾತನಾಡುತ್ತಿರುವುದು)

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries