ಬದಿಯಡ್ಕ: ಮಾನ್ಯ ಸಮೀಪದ ವಿಷ್ಣುಮೂರ್ತಿ ನಗರದಲ್ಲಿ ನಿರ್ಮಿತಿ ಕೇಂದ್ರವು ನಿರ್ಮಿಸುತ್ತಿರುವ ಮಳೆ ನೀರು ಸಂಗ್ರಹದ ಇಂಗುಗುಂಡಿ ವಿರುದ್ದ ಸ್ಥಳೀಯರ ಕ್ರಿಯಾ ಸಮಿತಿ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜನರು ಸಂಚರಿಸುವ ಪ್ರದೇಶವನ್ನು ಕೇಂದ್ರವಾಗಿಸಿ ಗುಂಡಿ ನಿರ್ಮಾಣ ಬೇಡವೆಂದು ಕ್ರಿಯಾ ಸಮಿತಿ ತಿಳಿಸಿದೆ. ಕ್ರಿಯಾ ಸಮಿತಿ ಪದಾಧಿಕಾರಿಗಳಾದ ಶಾಮಪ್ರಸಾದ ಮಾನ್ಯ, ಪ್ರೇಮಾ ಕುಮಾರಿ,ರಾಜೇಶ್ವರಿ,ರವಿ, ಮಂಜುನಾಥ ಉಪಸ್ಥಿತರಿದ್ದು ಮನವಿ ಸಲ್ಲಿಸಿದರು.
ಈ ಮಧ್ಯೆ ಸೋಮವಾರ ಬದಿಯಡ್ಕ ಗ್ರಾ.ಪಂ. ಕಾರ್ಯಾಲಯದಲ್ಲಿ ನಡೆದ ಸಭೆ ಗ್ರಾ.ಪಂ. ಅಧ್ಯಕ್ಷರ ನೇತೃತ್ವದಲ್ಲಿ ನಡೆದಿದ್ದಲ್ಲ ಎಂದು ಗ್ರಾ.ಪಂ. ಮೂಲಗಳು ತಿಳಿಸಿದೆ. ನಿರ್ಮಿತಿ ಕೇಂದ್ರದ ಅಧಿಕಾರಿಗಳು ಆಗಮಿಸಿ ಸಭೆ ನಡೆಸಿದ್ದರು. ಆ ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷರು ಭಾಗವಹಿಸಿದ್ದಾರೆ. ಆದರೆ ಸಭೆಯನ್ನು ಗ್ರಾ.ಪಂ. ಅಧ್ಯಕ್ಷರಾಗಲಿ, ಸದಸ್ಯರಾಗಲಿ ಸಂಯೋಜಿಸಿರಲಿಲ್ಲ ಎಂದು ತಿಳಿದುಬಂದಿದೆ.
ಜೊತೆಗೆ ಇತ್ತೀಚೆಗೆ ವಿವಾದಿತ ಪ್ರದೇಶಕ್ಕೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಿರ್ಮಿತಿ ಕೇಂದ್ರದ ಮೂಲಕ ಉದ್ದೇಶಿತ ಇಂಗುಗುಂಡಿ ನಿರ್ಮಿಸಲಾಗುವುದೆಂದೂ ಅವರು ತಿಳಿಸಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.