ಗುರುವಾಯೂರ್: ವಾರಣಾಸಿಯಷ್ಟೇ ಕೇರಳ ಕೂಡ ನನ್ನ ಮನಸ್ಸಿಗೆ ಹತ್ತಿರವಾದದ್ದು ಎಂದು ಪ್ರಧಾನಿ ಮೋದಿ ಶನಿವಾರ ಹೇಳಿದ್ದಾರೆ.
ನಿನ್ನೆ ಬೆಳಿಗ್ಗೆ ಕೇರಳದ ಗುರುವಾಯೂರ್ ದೇಗುಲಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ದೇವಾಲಯದಲ್ಲಿ ಕಮಲದ ಹೂವಿನ ತುಲಾಭಾರ ಸೇವೆಯಲ್ಲಿ ಭಾಗಿಯಾದರು. ಗುರುವಾಯೂರು ದೇವಸ್ಥಾನದಲ್ಲಿ ಸುಮಾರು ಒಂದು ಗಂಟೆ ಕಾಲ ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದ ಪ್ರಧಾನಿ ನಂತರ ಕೇರಳ ರಾಜ್ಯ ಬಿಜೆಪಿ ಸಮಿತಿ ಏರ್ಪಡಿಸಿರುವ ಅಭಿನಂದನಾ ಸಭೆಯಲ್ಲಿ ಭಾಗವಹಿಸಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
'ಉಡುಪಿಯಾಗಲಿ, ಗುರುವಾಯೂರ್ ಅಥವಾ ದ್ವಾರಕಾದೊಂದಿಗೆ ಗುಜರಾತ್ ಜನತೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ದ್ವರಕಾದೀಶ ಮತ್ತು ಕೃಷ್ಣನೊಂದಿಗೆ ಗುಜರಾತ್ ಜನತೆ ಧಾರ್ಮಿಕ ಮತ್ತು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಕೆಲವು ಪಂಡಿತರು ಕೇರಳದಲ್ಲಿ ಬಿಜೆಪಿ ಇನ್ನು ಖಾತೆಯನ್ನೇ ತೆರೆದಿಲ್ಲ ಎಂದು ವಿಶ್ಲೇಷಣೆ ಮಾಡುತ್ತಿದ್ದಾರೆ. ಆದರೆ ನಾನು ಹೇಳುವುದಿಷ್ಟೇ ಇದು ನಮ್ಮ ನೆಲ. ನಮ್ಮ ನೆಲದ ಜನತೆಗೆ ಧನ್ಯವಾದ ಹೇಳಲು ನಾನು ಇಲ್ಲಿಗೆ ಬಂದಿದ್ದೇನೆ. ಚುನಾವಣೆ ವೇಳೆ ಮಾತ್ರವಲ್ಲ ಚುನಾವಣೆ ಬಳಿಕವೂ ನಾವು ನಮ್ಮ ಜವಾಬ್ದಾರಿ ಮುಂದುವರೆಸಬೇಕು. 130 ಕೋಟಿ ಜನರು ನಮ್ಮನ್ನು ಆರಿಸಿರುವಾಗ ಅವರ ಸೇವೆಗಾಗಿ ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಪ್ರಜೆಗಳು ಮುಂದಿನ ಐದು ವರ್ಷಗಳ ಕಾಲಾವಧಿಗೆ ತಮ್ಮ ಜನ ಪ್ರತಿನಿಧಿಗಳನ್ನು ಆರಿಸುತ್ತಾರೆ. ಹೀಗಾಗಿ ನಾನು ಮುಂದಿನ ಐದು ವರ್ಷಗಳಿಗೆ ಅವರ ಸೇವಕರು. ದೇಶದ ಜನರಿಗೆ ಸೇವೆ ಮಾಡಲು ನಾವು ಬದ್ಧರಾಗಿರಬೇಕು ಎಂದು ಹೇಳಿದರು.
ಇದೇ ವೇಳೆ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಕಾರ್ಯಕರ್ತರು ಕೇವಲ ಚುನಾವಣೆಗೆ ಮಾತ್ರ ಸೀಮಿತರಾದವರಲ್ಲ. 365 ದಿನವೂ ಪಕ್ಷದ ವತಿಯಿಂದ ಜನರಿಗಾಗಿ ಶ್ರಮಿಸುತ್ತಾರೆ. ನಾವು ಕೇವಲ ಸರ್ಕಾರ ರಚನೆಗಾಗಿ ಮಾತ್ರ ರಾಜಕೀಯಕ್ಕೆ ಬಂದಿಲ್ಲ. ದೇಶ ನಿರ್ಮಾಣಕ್ಕಾಗಿ ಬಂದಿದ್ದೇವೆ ಎಂದು ಮೋದಿ ಹೇಳಿದ್ದಾರೆ.