HEALTH TIPS

ವೃತ್ತಿಯಲ್ಲಿ ಇಂಜಿನಿಯರ್-ಗಳಿಸಿದ್ದ ವಯೋಲಿನ್ ಪರೀಕ್ಷೆಯಲ್ಲಿ ರ್ಯಾಂಕ್!-ಇದು ಹಿಳ್ಳೆಮನೆ ಅನಿಲ್ ಕೃಷ್ಣನ ಯಶೋಗಾಥೆ

 
    ಕುಂಬಳೆ: ಸಂಗೀತ ಸಹಿತವಾದ ಶಾಸ್ತ್ರೀಯ ಕಲಾ ಪ್ರಕಾರವು ರಾಷ್ಟ್ರದ ಸಾಂಸ್ಕøತಿಕ ಧೀಮಂತಿಕೆಯಾಗಿ ಮಾನ ಪಡೆದಿರುವುದು ಕಲಾವಿದರ ಅಪರಿಮಿತ ಶ್ರಮ ಮತ್ತು ಸಹೃದಯ ಪ್ರೇಕ್ಷಕರ ಪ್ರೋತ್ಸಾಹದಿಂದ ಎನ್ನುವುದು ನಿರ್ವಿವಾದ. ಬೆಳೆಯುತ್ತಿರುವ ಹೊಸ ತಲೆಮಾರಿನ ಒಂದು ಕೊಂಡಿ ವ್ಯಾವಹಾರಿಕ ಜಗತ್ತಿನಲ್ಲಿ ಮುಳುಗಿದ್ದರೆ, ಮತ್ತೊಂದು ಕೊಂಡಿ ಈಗಲೂ ಸಾಹಿತ್ಯ-ಸಾಂಸ್ಕøತಿಕ ಜಗತ್ತಿನಲ್ಲಿ ಮುನ್ನಡೆಯುತ್ತಲೇ ಇದೆ. ಆದರೆ ಇದರ ಗುರುತಿಸಬಹುದಾದ ಕೊರತೆಯೆಂದರೆ ಗ್ರಾಮೀಣ ಮತ್ತು ನಗರ ಪ್ರದೇಶಗಳ ಮಧ್ಯೆ ಇರುವ ಪ್ರಾಯೋಜಕತ್ವದ ಪುಟ್ಟ ಗೋಡೆಯಷ್ಟೆ. ಗ್ರಾಮೀಣ ಪ್ರದೇಶಗಳಲ್ಲಿ ನಿಯಮಿತವಾದ ಪರಿಧಿಯ ಮಧ್ಯೆ ಕಲಾವಿದ ನಡೆಯುತ್ತಿದ್ದರೆ, ನಗರ ಪ್ರದೇಶಗಳಲ್ಲಿ ಸಾಕಷ್ಟು ಅವಕಾಶಗಳಿಗೆ ಕಾರಣ-ಮೆಟ್ಟಲುಗಳು ಲಭ್ಯವಾಗಿ ಸಾಧನೆಯ ಪಥದಲ್ಲಿ ಮುಂದುವರಿಯಲು ಉತ್ಸಾಹ ಮೂಡಿಸುವ ವಾತಾವರಣವಿರುವುದನ್ನು ಗಮನಿಸಬೇಕು.
    ಸಾಮಾನ್ಯವಾಗಿ ವೈದ್ಯಕೀಯ, ಇಂಜಿನಿಯರಿಂಗ್ ಮೊದಲಾದ ಉನ್ನತ ಗಳಿಕೆಯ ಕ್ಷೇತ್ರದಲ್ಲಿ ದುಡಿಯುವವರು ಕಲೆ, ಸಾಹಿತ್ಯಗಳಿಂದ ಬಹುದೂರ ಎಂಬ ಮಾತುಗಳು ಕೇಳಿಬರುತ್ತಿದೆ. ಕಲಾಸ್ವಾದನೆ-ನಿರ್ವಹಣೆಯ ಮನಸ್ಸಿದ್ದರೂ ತಮ್ಮ ವೃತ್ತಿ ಮತ್ತು ಒತ್ತಡಗಳ ಮಧ್ಯೆ ತೊಡಗಿಸಿಕೊಳ್ಳುವಲ್ಲಿ ಅವರಿಗೆ ತೊಡಕುಗಳಾಗುವುದೂ ಸಹಜ. ಆದರೆ ಇದಕ್ಕೆಲ್ಲ ವ್ಯತಿರಿಕ್ತವಾಗಿ ಬೆಂಗಳೂರಿನ ಬೃಹತ್ ಕಂಪೆನಿಯೊಂದರಲ್ಲಿ ಸಹಾಯಕ ಪ್ರಬಂಧಕರಾಗಿ ದುಡಿಯುತ್ತಿರುವ, ಮೆಕಾನಿಕಲ್ ಇಂಜಿನಿಯರಿಂಗ್ ಪದವೀಧರರಾದ ಗಡಿನಾಡಿನ ಯುವ ಸಾಧಕನೋರ್ವನ ಯಶೋಗಾಥೆ ಹೆಮ್ಮೆ ಮತ್ತು ಮಾದರಿ ಎನಿಸಿದೆ.
    ಪ್ರಸ್ತುತ ಗಡಿನಾಡು ಕಾಸರಗೋಡಿನ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಯುವ ಪ್ರತಿಭೆ ಕುಂಬಳೆ ನಾರಾಯಣಮಂಗಲ ಸಮೀಪದ ಹಿಳ್ಳೆಮನೆಯ ವೆಂಕಟಕೃಷ್ಣ ಭಟ್ ಹಾಗೂ ಚಿತ್ತರಂಜಿನಿ ಭಟ್ ದಂಪತಿಗಳ ಪುತ್ರ ಅನಿಲ್ ಕೃಷ್ಣ ಕುಂಬಳೆ ಇತ್ತೀಚೆಗೆ ಕರ್ನಾಟಕ ಸರಕಾರದ 2018ರ ಸೆಕೆಂಡರಿ ಪರೀಕ್ಷಾ ಮಂಡಳಿ ನಡೆಸಿದ ಸಂಗೀತ ಸೀನಿಯರ್ ಗ್ರೇಡ್ ವಯೋಲಿನ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ದಾಖಲಿಸಿ ನಾಡಿಗೆ ಕೀರ್ತಿ ತಂದಿದ್ದಾನೆ.ಪ್ರಸ್ತುತ ಬೆಂಗಳೂರಿನ ಸ್ಮಿತ್ ಆಂಡ್ ಪೌಂಡರ್ಸ್ ಕಂಪೆನಿಯಲ್ಲಿ ಸಹಾಯಕ ಪ್ರಬಂಧಕರಾಗಿರುವ ಅನಿಲ್ ಕೃಷ್ಣ ಕುಂಬಳೆ ವಯೋಲಿನ್ ಸಂಗೀತ ವಾದನ ಕಲೆಯಲ್ಲಿ ಈ ಸಾಧನೆ ದಾಖಲಿಸಿದ್ದಾನೆ.
   ಹಿನ್ನೆಲೆ:
   ಅನಿಲ್ ಕೃಷ್ಣ ಕುಂಬಳೆ ಇವರ ತಾಯಿ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ವಿದ್ವತ್ ಪಡೆದವರಾಗಿದ್ದು, ತಾಯಿಯ ಪ್ರೇರಣೆಯೇ ಮೊದಲು ಸಂಗೀತದತ್ತ ಆಕರ್ಷಿಸಿತು.  ಆರಂಭಿಕ ಶಿಕ್ಷಣವನ್ನು ತಾಯಿಯಿಂದಲೇ ಅಭ್ಯಸಿಸಿ ಬಳಿಕದ ಸಂಗೀತ ಶಿಕ್ಷಣವನ್ನು ಮಂಗಳೂರು ಬಾನುಲಿ ನಿಲಯದ ನಿಲಯ ಕಲಾವಿದರಾದ ವಿದ್ವಾನ್.ಎಂ.ಶ್ರೀನಾಥ್ ಮರಾಟೆ ಅವರಿಂದ ಅಭ್ಯಸಿಸಿದ. ಆದರೆ ಅನಿಲ್ ಕೃಷ್ಣನಿಗೆ ವಯೋಲಿನ್ ವಾದನದ ಆಸಕ್ತಿಯ ಅತೀವ ಆಕಾಂಕ್ಷೆಯ ಕಾರಣ ವಿದ್ವಾನ್. ಯು.ಜಿ.ಶರ್ಮಾ (ಸೋದರ ಮಾವ) ಅವರಿಂದ ಪ್ರಾಥಮಿಕ ಪಾಠ ಕರಗತಗೊಳಿಸಿ ಬಳಿಕ ಮಂಗಳೂರು ಆಕಾಶವಾಣಿಯ ನಿಲಯ ಕಲಾವಿದರಾದ ವಿದ್ವಾನ್.ಟಿ.ಜಿ.ಗೋಪಾಲಕೃಷ್ಣನ್ ಅವರಿಂದ ಕಳೆದ ಹತ್ತು ವರ್ಷಗಳಿಂದ ನಿರಂತರ ಶಿಕ್ಷಣ ಪಡೆದಿದ್ದಾನೆ.
   ತನ್ನ ಅಜ್ಜ ನಿವೃತ್ತ ಮುಖ್ಯೋಪಾಧ್ಯಾಯ, ಸಂಗೀತ ಕಲಾವಿದ, ನಾಟಕ ಹಾಗೂ ಗಮಕ ಕ್ಷೇತ್ರದಲ್ಲಿ ಖ್ಯಾತರಾಗಿ, ಬರಹಗಾರರೂ ಆಗಿದ್ದ ವಿದ್ವಾನ್.ಉಂಡೆಮನೆ ಗಣಪತಿ ಭಟ್ ಅವರ ನಿರಂತರ ಪ್ರೋತ್ಸಾಹ-ಪ್ರೇರಣೆಯಿಂದ ಪ್ರಭಾವಿತನಾಗಿ ತನಗೆ ಈ ಮಟ್ಟಕ್ಕೇರಲು ಸಾಧ್ಯವಾಯಿತೆಂದು ಅನಿಲ್ ಕೃಷ್ಣ ತಮ್ಮ ಸಂಗೀತ ಆಸಕ್ತಿಯ ಬಗ್ಗೆ ತಿಳಿಸುತ್ತಾರೆ. ಯಾವುದೇ ಆಧುನಿಕತೆಯ ಸ್ಪರ್ಶವಿಲ್ಲದೆ, ಶಾಸ್ತ್ರೀಯವಾದ ಪರಂಪರೆಯ ನಡೆಯನ್ನು ಅನುಸರಿಸುವ ಅನಿಲ್ ಕೃಷ್ಣ ಭರವಸೆಯ ಯುವ ಕಲಾವಿದನಾಗಿ ಗಡಿನಾಡಿಗೆ ಹೆಮ್ಮೆ ತಂದಿದ್ದಾರೆ.
     
  ಅನಿಲ್ ಕೃಷ್ಣನ ತಂದೆ ವೆಂಕಟಕೃಷ್ಣ ಭಟ್ ಮಧ್ಯಮ ವರ್ಗದ ಕುಟುಂಬ. ಪಾರಂಪರಿಕ ಪುಟ್ಟ ಹಿಡುವಳಿಯ ಕೃಷಿ ಹಾಗೂ ಕೇರಳ ದೈವಸ್ವಂ ಬೋರ್ಡ್‍ನ ಉದ್ಯೋಗಿಯಾಗಿ ಕುಂಬಳೆ ಕಣಿಪುರ ಶ್ರೀಕ್ಷೇತ್ರದಲ್ಲಿ ಹಿರಿಯ ಕ್ಲರ್ಕ್ ಆಗಿ ದುಡಿಯುತ್ತಿದ್ದಾರೆ.
   ಕಣ್ಣೂರು ಜಿಲ್ಲೆಯ ಮೃದಂಗಶೈಲೇಶ್ವರಿ ದೇವಸ್ಥಾನದ ಬಗ್ಗೆ ತಾಯಿ ವಿದುಷಿ ಚಿತ್ತರಂಜಿನಿ ಅವರು ಹಾಡಿರುವ ಸುಪ್ರಭಾತ ಗೀತೆಗೆ ಅನಿಲ್ ಕೃಷ್ಣ ಅವರು ವಯೋಲಿನ್ ಹಿನ್ನೆಲೆ ನೀಡಿದ್ದು, ಪ್ರಸಿದ್ದಿಯೊಂದಿಗೆ ಜನಮನ್ನಣೆ ಪಡೆದಿದೆ. ನಿಲ್ ಕೃಷ್ಣ ಅವರು ಪ್ರಾಥಮಿಕ ಶಿಕ್ಷಣವನ್ನು ನಾಯ್ಕಾಪಿನ ಲಿಟಲ್ ಲಿಲ್ಲಿ ಶಾಲೆ ಹಾಗೂ ಬಳಿಕದ ಪಿ.ಯು.ಶಿಕ್ಷಣವನ್ನು ಮಂಗಳೂರಿನ ಶಾರದಾ ಪಿ.ಯು.ಕಾಲೇಜಿನಲ್ಲಿ ಹಾಗೂ ಇಂಜಿನಿಯರಿಂಗ್ ನ್ನು ಮಂಗಳೂರಿನ ಕೆನರಾ ಕಾಲೇಜಿನಲ್ಲಿ  ಪೂರೈಸಿದ್ದು, ಎಲ್ಲಾ ಶಿಕ್ಷಣದಲ್ಲೂ ಪ್ರಥಮ ಶ್ರೇಣಿಯಲ್ಲೇ ತೇರ್ಗಡೆಯಾದ ಹೆಗ್ಗಳಿಕೆ ಇವರದ್ದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries