ಕಾಸರಗೋಡು: ಜಾಗತೀಕರಣದ ದೆಸೆಯಿಂದಾಗಿ ಸಾಹಿತ್ಯಿಕ ರಾಜಕೀಯ ಮುಂತಾದ ಕ್ಷೇತ್ರಗಳ ಸಿದ್ದಾಂತಗಳನ್ನು ಕೂಡ ಪುನಾರೂಪಿಸುವ ಅಗತ್ಯ ಬಂದೊದಗಿದೆ. ಬದುಕು ಮತ್ತು ಸಮಾಜದ ಕಡೆಗೆ ನಮ್ಮ ದೃಷ್ಟಿ ಬದಲಾಗಿರುವ ಈ ಸಂದರ್ಭದಲ್ಲಿ ನಮ್ಮ ದೇಸೀಯತೆಯನ್ನು ಮತ್ತು ಸಂಸ್ಕೃತಿಯನ್ನು ಹೊಸ ನೆಲಗಟ್ಟಿನಲ್ಲಿ ಕಟ್ಟಿಕೊಂಡು ಜಾಗತೀಕರಣದ ಸವಾಲುಗಳನ್ನು ಎದುರಿಸಬೇಕಾಗಿದೆ. ನಮ್ಮ ನೆಲೆಯನ್ನು ಗಟ್ಟಿ ಮಾಡಿಕೊಂಡು ಚಿಂತನೆಗಳನ್ನು ಹೊಸ ಚೌಕಟ್ಟಿನಲ್ಲಿ ಮರು ವ್ಯಾಖ್ಯಾನಿಸಿ ವಿಶ್ವ ಸಮುದಾಯದೊಂದಿಗೆ ಕೊಳುಕೊಡೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಕವಿ, ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಅವರು ಹೇಳಿದರು.
ಕಾಸರಗೋಡಿನ ಪಿಲಿಕುಂಜೆಯ ನಗರಸಭಾ ಸಭಾಂಗಣದಲ್ಲಿ ಜಿಲ್ಲಾ ಲೈಬ್ರೆರಿ ಕೌನ್ಸಿಲ್ ಆಶ್ರಯದಲ್ಲಿ ಭಾನುವಾರ ನಡೆದ "ಪರಸ್ಪರ" ಎಂಬ ಎರಡು ದಿನಗಳ ಕಾಲ ನಡೆದ ಸಾಹಿತ್ಯ ಉತ್ಸವದ ಬಹುಭಾಷಾ ಸಾಹಿತ್ಯ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತಾಡುತ್ತಿದ್ದರು.
ನಮ್ಮ ಭಾಷೆ ಮತ್ತು ಸಂಸ್ಕೃತಿಗೆ ಸವಾಲುಗಳು ಎದುರಾದ ಸಂದರ್ಭಗಳಲ್ಲಿ ನೆಲಮೂಲ ಜಾನಪದಕ್ಕೆ ಹಿಂದಿರುಗಿ ಜೀವಸತ್ವವನ್ನು ಪಡೆದುಕೊಂಡು ಹೊಸ ಅವತಾರಗಳೊಂದಿಗೆ ಪ್ರತ್ಯಕ್ಷವಾದುದನ್ನು ಇತಿಹಾಸದುದ್ದಕ್ಕೂ ಕಾಣುತ್ತೇವೆ. ಅಂತಹ ಸಂದರ್ಭಗಳಲ್ಲಿ ಭಾಷಾ ಸಾಮರಸ್ಯ ಮುಖ್ಯ ಅಂಶವಾಗಿರಬೇಕು ಎಂದು ಡಾ. ಪೆರ್ಲ ಅವರು ಹೇಳಿದರು.
ಪಾಡ್ದನಗಳ ನಾಡು ನುಡಿ ಪ್ರೇಮ ಎಂಬ ವಿಷಯದ ಬಗ್ಗೆ ಶಂಕರ ಸ್ವಾಮಿಕೃಪಾ ಮತ್ತು ಜಯರಾಜನ್ ಕುಂಡಂಕುಳಿ ಸೋದಾಹರಣ ಭಾಷಣ ನೀಡಿದರು.
ಜಾಗತೀಕರಣದ ನಾಟಕ ಕಲೆ ಎಂಬ ವಿಷಯದ ಕುರಿತು ಡಾ. ಮೀನಾಕ್ಷಿ ರಾಮಚಂದ್ರ ಮತ್ತು ಉಮೇಶ್ ಸಾಲಿಯಾನ್ ಉಪನ್ಯಾಸ ನೀಡಿದರು. ಅನಂತರ ಚರ್ಚಾಗೋಷ್ಠಿ ನಡೆಯಿತು.
ಲೈಬ್ರೆರಿ ಕೌನ್ಸಿಲ್ ಸಂಚಾಲಕರಾದ ಅಹಮ್ಮದ್ ಹುಸೇನ್ ಪಿ. ಕೆ. ಸ್ವಾಗತಿಸಿದರು. ಸದಸ್ಯ ಎ. ಜಿ. ರಾಧಾಕೃಷ್ಣ ಬಲ್ಲಾಳ್ ವಂದನಾರ್ಪಣೆಗೈದರು. ಕಾರ್ಯಕ್ರಮದ ಅಂಗವಾಗಿ ಪ್ರತಿಷ್ಠಿತ ಪ್ರಕಾಶಕರಿಂದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿತ್ತು.