ಮುಳ್ಳೇರಿಯ: ಮುಗ್ಧತೆ, ತುಂಟಾಟಗಳ ಕಲರವದೊಂದಿಗೆ ಪುಟ್ಟ ಪುಟ್ಟ ಹೆಜ್ಜೆ ಇರಿಸುತ್ತಾ ಅಕ್ಷರಲೋಕಕ್ಕೆ ಆಗಮಿಸಿದ ಮಕ್ಕಳನ್ನು ಪ್ರೀತಿ , ವಾತ್ಯಲ್ಯದಿಂದ ಸ್ವಾಗತಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ನಡೆದ ಶಾಲಾ ಪ್ರವೇಶೋತ್ಸವ ಯಶಸ್ವಿಯಾಗಿದೆ.
ಕೆಲವು ಪುಟಾಣಿಗಳು ಪೋಷಕರೊಂದಿಗೆ ನಗುನಗುತ್ತಾ ಶಾಲೆಗೆ ಆಗಮಿಸಿದರೆ, ಮತ್ತೆ ಕೆಲವರು ಅಳುತ್ತಾ ಬಂದಿದ್ದರು. ಶಾಲೆಗಳ ಶಿಕ್ಷಕರು, ಇತರ ಸಿಬ್ಬಂದಿ, ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳು, ಹಿರಿಯ ವಿದ್ಯಾರ್ಥಿಗಳು ಪುಟಾಣಿಗಳಿಗೆ ಕೊಡುಗೆ, ಸಿಹಿ ಹಂಚಿ ಪ್ರೀತಿಯಿಂದ ಬರಮಾಡಿಕೊಂಡರು.
ಒಂದರಿಂದ 12ನೇ ತರಗತಿ ವರೆಗಿನ ಶಾಲಾ ಪ್ರವೇಶೋತ್ಸವ ಒಟ್ಟಂದದಲ್ಲಿ ನಡೆದುದು ವಿಶೇಷವಾಗಿತ್ತು. ಜಿಲ್ಲಾ ಮಟ್ಟದ ಶಾಲಾ ಪ್ರವೇಶೋತ್ಸವ ಬಂದಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿನಡೆಯಿತು.
ಶಾಸಕ ಕೆ.ಕುಂಞÂರಾಮನ್ ಸಮಾರಂಭ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಶಿಕ್ಷಣ ರಂಗದ ಪ್ರಗತಿಗೆ ರಾಜ್ಯ ಸರಕಾರ ಕೈಗೊಂಡ ಕ್ರಮ ಮಹತ್ತರವಾದುದು. ಈ ಮೂಲಕ ನಾಡಿನ ಸಮಗ್ರ ಅಭಿವೃದ್ಧಿಗೆ ನಾಂದಿ ಹಾಡಲಾಗಿದೆ. ಸಾರ್ವಜನಿಕ ಶಿಕ್ಷಣ ಸಂರಕ್ಷಣೆಗೆ ಜಾರಿಗೊಳಿಸಿದ ಶಿಕ್ಷಣ ಯಜ್ಞ ಯೋಜನೆ ಮೂಲಕ ಸ್ಮಾರ್ಟ್ ತರಗತಿಗಳು,ನೂತನ ಕಟ್ಟಡಗಳು ಇತ್ಯಾದಿ ನಿರ್ಮಾಣಗೊಂಡು ಶಾಲೆಗಳ ಸರ್ವತೋಮುಖ ಅಭಿವೃದ್ದಿ ನಡೆದಿದೆ ಎಂದು ಹೇಳಿದರು.
ಕಾರಡ್ಕ ಗ್ರಾಮಪಂಚಾಯತಿ ಅಧ್ಯಕ್ಷೆ ಓಮನಾ ರಾಮಚಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ ಎಂ.ನಾರಾಯಣನ್ ಕಲಿಕೋಪಕರಣ ವಿತರಣೆ ನಡೆಸಿದರು. ಕುತ್ತಿಕೋಲ್ ಗ್ರಾಮಪಂಚಾಯತಿ ಉಪಾಧ್ಯಕ್ಷ ಪಿ.ಗೋಪಿನಾಥನ್, ಸದಸ್ಯರಾದ ಕೆ.ಆರ್.ರಂಜಿನಿ, ಧರ್ಮಾವತಿ, ಜಿಲ್ಲಾ ಶಿಕ್ಷಣಾಧಿಕಾರಿ ಎನ್.ನಂದಿಕೆಶನ್, ಸಾರ್ವಜನಿಕ ಶಿಕ್ಷಣ ಯಜ್ಞ ಯೋಜನೆಯ ಪರಿಣತ ಡಾ.ರತೀಶ್ ಕಾಳಯಾಡನ್ ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭ ಅಂಗವಾಗಿ ವರ್ಣರಂಜಿತ ಮೆರವಣಿಗೆ ನಡೆಯಿತು. ಕುಟುಂಬಶ್ರೀ ಮಹಿಳೆಯರ ನೇತೃತ್ವದಲ್ಲಿ ಚೆಂಡೆಮೇಳ, ಶಿಕ್ಷಕರು, ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳು ಮುತ್ತುಕೊಡೆ ಹಿಡಿದು ಮೆರವಣಿಗೆಯಲ್ಲಿ ಗಮನ ಸೆಳೆದರು. ವಿದ್ಯಾರ್ಥಿ ಪೊಲೀಸರು, ಎನ್.ಎಸ್.ಎಸ್., ರೆಡ್ ಕ್ರಾಸ್ ಸದಸ್ಯರು ಪಥಸಂಚಲನದ ಮೆರಗು ಹೆಚ್ಚಿಸಿದರು.