ಬದಿಯಡ್ಕ: ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವಿನ ಮೇವಿಗಾಗಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಹಮ್ಮಿಕೊಂಡ ಹಲಸುಮೇಳದಲ್ಲಿ ಆರಂಭದಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಗ್ರಾಮೀಣ ಹಲಸಿನ ತಿಂಡಿ ತಿನಿಸುಗಳನ್ನು ಸೇವಿಸಿ ಮೆಚ್ಚುಗೆಯನ್ನು ಸೂಚಿಸಿದರು. ಅಚ್ಚುಕಟ್ಟಾದ ವ್ಯವಸ್ಥೆಯ ಮೂಲಕ ಸಂಘಟಕರು ಕಾರ್ಯಕ್ರಮವನ್ನು ರೂಪುಗೊಳಿಸಿದ್ದರೂ ಏಕಕಾಲದಲ್ಲಿ ಜನರ ಆಗಮನದಿಂದ ಎಲ್ಲೆಡೆ ಜನ ತುಂಬಿತುಳುಕುತ್ತಿದ್ದು ಕಂಡುಬರುತ್ತಿತ್ತು. ತಮ್ಮ ಅಗತ್ಯದ ವಸ್ತುಗಳ ಖರೀದಿಗೆ ಹರಸಾಹಸಪಡಬೇಕಾಗಿ ಬಂದಿತ್ತು. ಮೇಳದ ವಿವಿಧ ಸ್ಟಾಲ್‍ಗಳಲ್ಲಾಗಿ ಹಲಸಿನ ಕಾಯಿ ದೋಸೆ, ಹಣ್ಣಿನ ದೋಸೆ, ಹಣ್ಣಿನ ಕೊಟ್ಟಿಗೆ, ಗೆಣಸಲೆ, ಹಣ್ಣು ಹಾಗೂ ಕಾಯಿಯ ಗುಳಿ ಅಪ್ಪ, ಸೇಮಿಗೆ, ಹಲಸಿನ ಇಡ್ಲಿ, ಹಲಸಿನ ಬೀಜದ ಹೋಳಿಗೆ, ಹಣ್ಣಿನ ಹಲ್ವ, ಬೀಜದ ಹಲ್ವ, ಉಂಡ್ಲಕಾಳು, ಚಿಪ್ಸ್, ಹಪ್ಪಳಗಳು, ಕಾಯಿಸೊಳೆ, ಹಣ್ಣಿನ ಸೊಳೆ, ಹಲಸಿನ ಹಣ್ಣಿನ ಡ್ರೈ ಸೊಳೆ, ಹಲಸಿನ ಹಣ್ಣಿನ ಕೇಕ್, ಹಲಸಿನ ಬೀಜದ ಬಿಸ್ಕತ್ತು, ವಡೆ, ಹಲಸಿನ ಸೊಳೆಯ ರೊಟ್ಟಿ, ಹಲಸಿನ ಹಣ್ಣಿನ ಜ್ಯೂಸ್, ಹಲಸಿನ ಹಣ್ಣಿನ ಜೆಲ್ಲಿ ಜಾಮ್, ಹಲಸಿನ ಕೇಕ್, ಹಲಸಿನ ಬೀಜದ ಪಾಯಸ, ಪೆರಟಿ ಪಾಯಸ, ಜೆರಡಿ ಪಾಯಸ, ಹಣ್ಣಿನ ಪಾಯಸ, ಕಾಯಿ ಚಿಪ್ಸ್, ಬೀಜದ ರಸಂ ಪುಡಿ, ಹಲಸಿನ ಐಸ್ ಕ್ರೀಂ, ಐಸ್ ಕ್ಯಾಂಡಿಗಳು, ಹಲಸಿನ ಗುಜ್ಜೆ ಮಂಚೂರಿ, ಗುಜ್ಜೆ ಕಬಾಬ್ ವಿವಿಧ ನಮೂನೆಯ ಸಮೂಸಗಳು, ಗುಜ್ಜೆ ಪಲಾವು ಅಲ್ಲದೆ ಇನ್ನೂ ಹಲವು ರೀತಿಯ ಹಲಸಿನ ವಿವಿಧ ರೀತಿಯ ತಿಂಡಿ ತಿನಸುಗಳು, ಉತ್ಪನ್ನಗಳನ್ನು ಮೇಳದಲ್ಲಿ ವ್ಯವಸ್ಥೆಗೊಳಿಸಲಾಗಿತ್ತು. ಆಗಮಿಸಿದ ಅತಿಥಿಗಳಿಗೆ ಹಲಸಿನ ಬೀಜದ ಕಷಾಯವನ್ನು ಪಾನೀಯವಾಗಿ ನೀಡಲಾಗಿತ್ತು. ವಿವಿಧ ಜಾತಿಯ ಹಲಸಿನ ಗಿಡಗಳನ್ನು ಅನೇಕರು ಖರೀದಿಸಿದರು.
* ಬದಿಯಡ್ಕ ಮಹಿಳೋದಯದ ಸ್ಟಾಲ್ ಹೆಚ್ಚು ಜನಾಕರ್ಷಣೆಯ ಕೇಂದ್ರವಾಗಿತ್ತು.
* ಹಲಸಿನ ಕ್ಯಾಂಡಿ, ಐಸ್ ಕ್ರೀಂ ಸವಿದು ಜನ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.
* ಮುಳ್ಳೇರಿಯ ಹವ್ಯಕ ಮಂಡಲದ ನೇತೃತ್ವದಲ್ಲಿ ಸಮಸ್ತ ಗೋಭಕ್ತರು ಒಂದುಗೂಡಿ ಕಾರ್ಯಕ್ರಮದ ಯಶಸ್ಸಿಗೆ ದುಡಿದಿದ್ದರು.