ಮುಳ್ಳೇರಿಯ: ಭಾಷಾವಾರು ಪ್ರಾಂತ್ಯ ರಚನೆಯ ಕಾಲದಲ್ಲಿ ಕನ್ನಡಿಗರ ಬೀಡಾದ ಕಾಸರಗೋಡು ಕೇರಳಕ್ಕೆ ಸೇರಿಸಲ್ಪಟ್ಟುದುದು ನಿಜಕ್ಕೂ ಚರಿತ್ರೆಯ ಒಂದು ದುರಂತ. ಅಂದು ಆದ ಅನ್ಯಾಯ ಇಂದಿಗೂ ನಮ್ಮನ್ನು ಪೀಡಿಸುತ್ತಿದೆ. ನಮ್ಮ ಭಾಷೆ, ಕಲೆ, ಸಂಸ್ಕøತಿಯ ರಕ್ಷಣೆಗೆ ಅವ್ಯಾಹತ ಹೋರಾಟ ನಡೆಯುತ್ತಿದ್ದು, ಅದು ಫಲಕಾರಿಯಾಗದೆ ನಾವು ವಿವಿಧ ಸಂಕಷ್ಟ ಅನುಭವಿಸುತ್ತಿದ್ದೇವೆ. ನಮ್ಮ ಹಿಂದಿನ ಹಿರಿಯ ಹೋರಾಟಗಾರರು ನ್ಯಾಯಾಲಯದ ಮೂಲಕ ಸೌಲಭ್ಯ ಒದಗಿಸಿಕೊಟ್ಟಿದ್ದರೂ ಅದು ಜಾರಿಗೆ ಬರುತ್ತಿಲ್ಲ. ಸಂವಿಧಾನಬದ್ಧ ಹಕ್ಕು, ಸವಲತ್ತುಗಳನ್ನು ಪಡೆಯಲು ನಾವು ಇಂದಿಗೂ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಅದರ ಜೊತೆಗೆ ಗಾಯದ ಮೇಲೆ ಬರೆ ಎಳೆದಂತೆ ಮಲಯಾಳ ಕಡ್ಡಾಯ ಮೊದಲಾದ ಆದೇಶಗಳನ್ನು ಹೊರಡಿಸಿ ಕನ್ನಡಿಗರನ್ನು ಗದರಿಸುವ ವಿವಿಧ ತಂತ್ರಗಳು ಸದಾ ನಡೆಯುತ್ತಿವೆ. ಈ ನಾಡಿನ ಮಣ್ಣಿನ ಮಕ್ಕಳಾದ ನಾವು ನಮ್ಮ ಭಾಷೆ, ಸಂಸ್ಕøತಿ ಉಳಿಸಿಕೊಳ್ಳಲು ಒಗ್ಗಟ್ಟಿನಿಂದ ಹೋರಾಟ ಮಾಡಬೇಕಾಗಿದೆ. ಆಳುವ ಸರಕಾರ ಕನ್ನಡಿಗರಿಗೆ ನ್ಯಾಯ ಒದಗಿಸಿಕೊಡುವ ತನಕ ಸದಾ ಎಚ್ಚರದಿಂದ ಕಾನೂನುಬದ್ಧ ಸೌಲಭ್ಯಗಳು ಏನಿದೆ ಎಂಬುದನ್ನು ತಿಳಿದು ಸರ್ವರೂ ಒಂದಾಗಿ ಪ್ರತಿಭಟನೆ, ಧರಣಿ ಸತ್ಯಾಗ್ರಹ ಮಾಡುವುದು ಅನಿವಾರ್ಯ ಎಂದು ಹಿರಿಯ ನ್ಯಾಯವಾದಿ, ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ಮುರಳೀಧರ ಬಳ್ಳಕ್ಕುರಾಯ ಅವರು ಹೇಳಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಹಾಗು ಹೊಸದುರ್ಗ ತಾಲೂಕು ಕನ್ನಡ ಸಂಘ ಇವುಗಳ ಜಂಟಿ ಆಶ್ರಯದಲ್ಲಿ ಬಟ್ಟತ್ತೂರಿನಲ್ಲಿ ಇತ್ತೀಚೆಗೆ ಜರಗಿದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಹೊಸದುರ್ಗ ತಾಲೂಕು ಕನ್ನಡ ಸಂಘದ 20 ನೇ ವಾರ್ಷಿಕ ಮಹಾಸಭೆಯಲ್ಲಿ ಹೊಸದುರ್ಗ ತಾಲೂಕು ಕನ್ನಡದ ಸಂಘದ ಕಾರ್ಯದರ್ಶಿ ಬಾಲಕೃಷ್ಣ ಎಚ್. ವರದಿ ಹಾಗು ಲೆಕ್ಕಪತ್ರ ಮಂಡಿಸಿದರು. ಕನ್ನಡ ಸಂಘದ ಅಧ್ಯಕ್ಷ ಹಿರಿಯ ಕನ್ನಡ ಹೋರಾಟಗಾರ ಎಚ್.ಎಸ್.ಭಟ್ ಅಧ್ಯಕ್ಷತೆ ವಹಿಸಿದರು. ಅವರು ರ್ಯಾಂಕ್ ವಿಜೇತೆ ಶಶಿರೇಖಾ ಎನ್. ಹಾಗು ಭರತನಾಟ್ಯ ವಿಶಾರದ ಪ್ರಮೀಳಾ ಉದಯಶಂಕರ ಅವರನ್ನು ಅಭಿನಂದಿಸಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಹೊಸದುರ್ಗ ತಾಲೂಕು ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಚೈತ್ರಾ ಸಿ.ಕೆ, ಪ್ರಜ್ವಲ್ ಎನ್, ರಿಯಾ ಮೋಹನ್, ಪ್ರಿಯೇಶ್, ಅಶ್ವಿನ್ ಎನ್, ಪ್ರಿಯಾಂಕ ಕೆ. ಅವರು ಅಧ್ಯಕ್ಷ ಎಚ್.ಎಸ್.ಭಟ್ ಅವರಿಂದ ಬಹುಮಾನ ಪಡೆದುಕೊಂಡರು.
ಸಮಾಜಮುಖೀ ಚಿಂತಕರೂ, ಸಂಘಟಕರೂ, ಹಿರಿಯ ಸಾಧಕರೂ ಆದ ಬಿ.ಕೆ.ಹರಿಪ್ರಸಾದ್, ನಾರಾಯಣ ಎಂ. ಹಾಗು ಕಮಲಾಕ್ಷ ದೊಡ್ಡಮನೆ ಅವರನ್ನು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ವಿ.ಭಟ್ ಅಭಿನಂದಿಸಿ, ಶಾಲು ಹೊದೆಸಿ, ಸ್ಮರಣಿಕೆ ನೀಡಿ ಸಮ್ಮಾನಿಸಿದರು. ನಿವೃತ್ತ ಪೆÇಲೀಸ್ ಅಧಿಕಾರಿ ವಾಸುದೇವ ಕೆ. ಅವರು ಸಮ್ಮಾನಿತರು ಸರ್ವದೃಷ್ಟಿಯಿಂದ ಅರ್ಹರು ಎಂದು ಸಮರ್ಥಿಸುತ್ತಾ ಸರಕಾರವು ಕನ್ನಡವನ್ನು ನಿರ್ಲಕ್ಷಿಸುತ್ತಿರುವ ಪ್ರವೃತ್ತಿಯನ್ನು ಖಂಡಿಸಿದರು. ಇದರ ವಿರುದ್ಧ ಒಮ್ಮನಸ್ಸಿನಿಂದ ಸರ್ವರೂ ಹೋರಾಡಬೇಕಾಗಿದೆ ಎಂದು ಕರೆ ನೀಡಿದರು. ಸಮ್ಮಾನ ಸ್ವೀಕರಿಸಿದ ಬಿ.ಕೆ.ಹರಿಪ್ರಸಾದ್, ನಾರಾಯಣ ಎಂ, ಕಮಲಾಕ್ಷ ದೊಡ್ಡಮನೆ ಹಿತನುಡಿಗಳನ್ನಾಡಿದರು.
ನಿವೃತ್ತ ಮುಖ್ಯೋಪಾಧ್ಯಾಯ, ಹಿರಿಯ ಹೋರಾಟಗಾರ ವಸಂತ ಶೆಣೈ, ಕನ್ನಡ ಸಂಘದ ಮಾಜಿ ಅಧ್ಯಕ್ಷ ಎಚ್.ಲಕ್ಷ್ಮಣ, ಕ.ಸಾ.ಪ. ಗೌರವ ಕಾರ್ಯದಶಿರ ನವೀನಚಂದ್ರ ಮಾಸ್ತರ್ ಮಾನ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿವೃತ್ತ ಪ್ರಾಂಶುಪಾಲೆ ಎಂ.ಶಶಿಕಲಾ ಕಾರ್ಯಕ್ರಮ ನಿರ್ವಹಿಸಿದರು. ಬಾಲಕೃಷ್ಣ ಮಾಸ್ತರ್ ಸ್ವಾಗತಿಸಿ, ಅಧ್ಯಾಪಕ ಕುಶ ವಂದಿಸಿದರು. ವಿದ್ಯಾರ್ಥಿನಿ ಪ್ರಾರ್ಥನಾ ಪ್ರಾರ್ಥನೆ ಹಾಡಿದರು.