ಕುಂಬಳೆ: ಕುಂಬಳೆ ಗ್ರಾ.ಪಂ. ವ್ಯಾಪ್ತಿಗೊಳಪಟ್ಟ ಪ್ರದೇಶಗಳಲ್ಲಿ ಗೂಂಡಾ ಮಾಫಿಯಾಗಳ ನೇತೃತ್ವದಲ್ಲಿ ಸಂಘರ್ಷಕ್ಕೆ ಯತ್ನ ನಡೆದಿರುವುದಾಗಿ ಬಿಜೆಪಿ ಆರೋಪಿಸಿದೆ.
ಕಂಚಿಕಟ್ಟೆ, ಮಳಿ ಸೇತುವೆ, ಕೊಡ್ಯಮೆ, ಚೆಕ್‍ಪೋಸ್ಟ್ ಕಳತ್ತೂರು, ಶಾಂತಿಪಳ್ಳ ಪ್ರದೇಶಗಳಲ್ಲಿ ಕಾಫಾ, ಕೊಲೆ ಆರೋಪಿಗಳ ನೇತೃತ್ವದಲ್ಲಿ ಹಾಗೂ ಸಿಪಿಎಂ ಕುಂಬಳೆ ಏರಿಯಾ ಕಾರ್ಯದರ್ಶಿಯ ಬೆಂಬಲದೊಂದಿಗೆ ಸಂಘರ್ಷ ಸೃಷ್ಟಿಸಲು ತಂಡವು ಯತ್ನಿಸುತ್ತಿದೆ ಎಂದು ಕುಂಬಳೆ ಪಂಚಾಯತಿ ಬಿಜೆಪಿ ಸಮಿತಿ ಆರೋಪಿಸಿದೆ. ಕುಂಬಳೆಯಲ್ಲಿ ವ್ಯಾಪಕವಾಗಿ ಮರಳು ಸಾಗಾಟ, ಮಟ್ಕ ದಂಧೆ, ಜುಗಾರಿ ಸಹಿತ ಅಹಿತಕರ ವ್ಯವಹಾರಗಳು ರಾಜಾರೋಷವಾಗಿ ನಡೆಯುತ್ತಿದೆ. ಜೊತೆಗೆ ಸಣ್ಣ ವ್ಯಾಪಾರಿಗಳಿಂದ ಹಫ್ತಾ ವಸೂಲು ಮಾಡುವ ಮೂಲಕ ಅಸಂತೋಷ ಸೃಷ್ಟಿಗೆ ಯತ್ನಿಸುತ್ತಿರುವುದು ಕಂಡುಬಂದಿದೆ ಎಂದು ಬಿಜೆಪಿ ಆರೋಪಿಸಿದೆ.
ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತ ಗಳಿಸಿದ ಬಿಜೆಪಿ ಹಾಗೂ ಸಂಘಪರಿವಾರದ ನೇತೃತ್ವವದಲ್ಲಿ ಕುಂಬಳೆಯಲ್ಲಿ ಕೆಲವು ದಿನಗಳ ಹಿಂದೆ ನಡೆದ ವಿಜಯೋತ್ಸವ ಮೆರವಣಿಗೆಯಲ್ಲಿ ಗಲಭೆ ಸೃಷ್ಟಿಸುವ ಸಲುವಾಗಿ ಧ್ವಜ ಎಸೆದಿರುವುದು ಮತ್ತು ಪ್ರಚೋದನಕಾರಿ ಘೋಷಣೆ ಕೂಗುವ ಯತ್ನಗಳು ಪೋಲೀಸರ ಸಮ್ಮುಖದಲ್ಲೇ ನಡೆಸಲಾಯಿತು. ಆದರೆ ಈ ಬಗ್ಗೆ ಪೋಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಪೋಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು. ಶಾಲಾಕಾಲೇಜು ಪರಿಸರದಲ್ಲಿ ವ್ಯಾಪಕಗೊಂಡಿರುವ ಮಾದಕ ವಸ್ತುಗಳ ವ್ಯಾಪಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ನಿಯಂತ್ರಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಕುಂಬಳೆ ಪಂಚಾಯತಿ ಘಟಕ ಆಗ್ರಹಿಸಿದೆ.
ಕುಂಬಳೆಯ ಪಕ್ಷದ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಬಿಜೆಪಿ ಪಂಚಾಯತಿ ಘಟಕದ ಅಧ್ಯಕ್ಷ ಶಂಕರ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಸತ್ಯಶಂಕರ ಭಟ್, ಜಿಲ್ಲಾ ಸಮಿತಿ ಸದಸ್ಯ ರಮೇಶ್ ಭಟ್ ಕುಂಬಳೆ, ಮಂಡಲ ಉಪಾಧ್ಯಕ್ಷ ವಿನೋದನ್, ಗ್ರಾ.ಪಂ.ಸದಸ್ಯ ಹರೀಶ್ ಗಟ್ಟಿ, ಸುಜಿತ್ ರೈ ಉಪಸ್ಥಿತರಿದ್ದು ಮಾತನಾಡಿದರು. ಪಂಚಾಯತಿ ಸಮಿತಿ ಕಾರ್ಯದರ್ಶಿ ಸುಧಾಕರ ಕಮತ್ ಸ್ವಾಗತಿಸಿ, ಮಹೇಶ್ ಪುಣಿಯೂರು ವಂದಿಸಿದರು.