ಮಂಜೇಶ್ವರ: ತನ್ನೊಳಗಿನ ಅಸೂಯೆ, ದ್ವೇಶ, ಕೊರಗುಗಳ ವಿರುದ್ದ ಧ್ವನಿ ಎತ್ತದಿದ್ದರೆ ಕವಿ ಕವಿಯಾಗಲಾರ. ಪರಂಪರೆಯಿಂದ ಹೊರತಾದ ಬರಹಗಳಿಂದ ಕವಿತ್ವ ಸಿದ್ದಿಸುವುದಿಲ್ಲ. ದಲಿತ ಚಳವಳಿಗಳು ಏನು ಮಾಡಬೇಕಿತ್ತೋ ಅದರಿಂದ ಹೊರತಾಗಿ ಅಡ್ಡದಾರಿಗಳನ್ನು ಹಿಡಿದಾಗ ಅದರೊಳಗೆ ಇದ್ದು ಧ್ವನಿಯೆತ್ತಿದ ಮಹಾನ್ ಕವಿಯಾದ ಎನ್ಕೆ ಹನುಮಂತಯ್ಯರ ಬರಹದಂತೆಯೇ ಬದುಕೂ ಸಂಘರ್ಷದೊಂದಿಗೆ ಅವನತಿಗೊಂಡದ್ದು ದುರಂತ ಎಂದು ಉಜಿರೆ ಎಸ್‍ಡಿಎಂ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ, ವಿಮರ್ಶಕ ಡಾ.ರಾಜಶೇಖರ ಹಳೇಮನೆ ಅವರು ತಿಳಿಸಿದರು.
ತಲಪಾಡಿ ಬಳಿಯ ಕಣ್ವತೀರ್ಥದಲ್ಲಿರುವ ಮೂಡಬಿದ್ರೆ ಆಳ್ವಾಸ್ ವಿದ್ಯಾಸಂಸ್ಥೆಯ ಪ್ರಾದ್ಯಾಪಕ, ಸಾಹಿತಿ ಟಿ.ಎ.ಎನ್.ಖಂಡಿಗೆ ಅವರ ಸ್ವಗೃಹದಲ್ಲಿ ಆಯೋಜಿಸುತ್ತಿರುವ ಸರಣಿ ಕೃತಿ ವಿಮರ್ಶೆಯ ಎಂಟನೇ ಕಾರ್ಯಕ್ರಮದಲ್ಲಿ ದಿ.ಎನ್ಕೆ.ಹನುಮಂತಯ್ಯನವರ "ಮಾಂಸದಂಗಡಿಯ ನವಿಲು" ಕವಿತಾ ಸಂಕಲನದ ವಿಮರ್ಶೆ ನಡೆಸಿ ಸಂವಾದದಲ್ಲಿ ಮಾತನಾಡಿದರು.
ಲೋಕವನ್ನು ಕರುಣೆಯಿಂದ ನೋಡುವ ಕಲೆಯನ್ನು ಅರಗಿಸಿಕೊಂಡಿದ್ದ ಹನುಮಂತಯ್ಯನವರ ಬರಹಗಳು ತೀವ್ರ ಒಳನೋಟಗಳ ಸಂವೇದನೆಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸಿದೆ. ಅವರ ಬರಹಗಳ ಸತ್ಯದಂತೆ ನಡವಳಿಕೆಗಳೂ ಉತ್ಕøಷ್ಟವಾಗಿತ್ತು ಎಂದು ಅವರು ಈ ಸಂದರ್ಭ ವಿಶ್ಲೇಶಿಸಿದರು. 20ನೇ ಶತಮಾನದ ಕೊನೆಯ ದಶಕದಲ್ಲಿ ಭಾರತಕ್ಕೆ ಕಾಲಿರಿಸಿದ ಜಾಗತೀಕರಣದಿಂದ ಹುಟ್ಟಿದ ಹೊಸ ಆರ್ಥಿಕ ನೀತಿ, ವ್ಯಾಪಾರೀಕರಣ ಇಲ್ಲಿಯ ಪರಂಪರೆಯನ್ನು ನಾಶಗೊಳಿಸಿತು. ಈ ವಿದ್ಯಮಾನಗಳ ಪರಿಣಾಮಗಳನ್ನು ಸ್ವತಃ ಅನುಭವಿಸಿ ರೂಪಕಗಳ ಮೂಲಕ ಕವಿತೆಗಳಲ್ಲಿ ಅಭಿವ್ಯಕ್ತಿಸಿದ ಹನುಮಂತಯ್ಯ ಕವಿತೆಯೊಂದರ ಹುಟ್ಟು ಮಿಂಚಿನ ಅಪ್ಪುಗೆಯಂತೆ ಎಂದು ನಂಬಿದವರು ಎಂದು ಡಾ.ರಾಜಶೇಖರ ಹಳೇಮನೆ ನೆನಪಿಸಿದರು. ಸತ್ಯವನ್ನು ಸತ್ಯದಷ್ಟೇ ಪರಿಶುದ್ದತೆಯಿಂದ ಪ್ರತಿಪಾದಿಸಿದ ಹನುಮಂತಯ್ಯ ಸಾಕ್ರೆಟೀಸನಂತೆ ಸತ್ಯದ ಕೆನ್ನಾಲಿಗೆಯ ಹಬೆಗೆ ಇನ್ನಿಲ್ಲವಾದುದು ಆಧುನಿಕ ಸಾಹಿತ್ಯ ಚರಿತ್ರೆಯ ದುರಂತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಟಿ.ಎ.ಎನ್.ಖಂಡಿಗೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸುಂದರ ಸಮಾಜ ಸೃಷ್ಟಿಯಲ್ಲಿ ಕೈದೀವಿಗೆಗಳಾಗಿ ಮುನ್ನಡೆಸುವ ಸಾಹಿತ್ಯ ಬರಹಗಳ ಗಂಭೀರ ಚಿಂತನೆಗಳು ಇಂದು ಕುಸಿದಿರುವುದರಿಂದ ದ್ವೀಪಗಳಂತೆ ಮನುಷ್ಯ ಜೀವನ ಕರಾಳತೆಯತ್ತ ಕುಸಿಯುವ ಭೀತಿ ಇದೆ. ಈ ನಿಟ್ಟಿನಲ್ಲಿ ಸಮಾನ ಮನಸ್ಕ ಸಾಹಿತ್ಯ ಪ್ರೇಮಿಗಳು ಅಕ್ಷರ ಲೋಕದ ಬೆಳಕನ್ನು ಕತ್ತಲೆಯತ್ತ ಬೀರುವ ಯತ್ನಗಳನ್ನು ಬಲಪಡಿಸಬೇಕು ಎಂದು ತಿಳಿಸಿದರು. ಕನ್ನಡ ತಾಯ್ನೆಲದ ಮಣ್ಣಿನ ಋಣವನ್ನು ಸಾಹಿತ್ಯ ಸೇವೆಯ ಕಿರು ಯತ್ನದ ಮೂಲಕ ಸಲ್ಲಿಸಿದ ಹೆಮ್ಮೆ ಕೃತಿ ವಿಮರ್ಶೆಯ ಸರಣಿ ಕಾರ್ಯಕ್ರಮಗಳ ಮೂಲಕ ಸಾಧಿಸಲಾಗಿದೆ. ಮನೆಮನಗಳಲ್ಲಿ ಇಂತಹ ತಿದಿ ಎಚ್ಚರಗೊಳಿಸಬೇಕು ಎಂದು ಕರೆನೀಡಿ ಸ್ವಾಗತಿಸಿದರು.
ಡಾ.ವಿಜಯಕುಮಾರ್, ಶಂಭು ನಂಬೂದಿರಿ, ಸದಾನಂದ ನಾರಾವಿ, ಮೊಹಮ್ಮದ್ ಮೂಡಬಿದ್ರೆ, ಈಶ್ವರ ಮಾಸ್ತರ್, ನಿರುಪಮಾ, ಕೃಷ್ಣಪ್ಪ ಪೂಜಾರಿ,ನಾರಾಯಣ, ಸುಲೋಚನಾ ಮೊದಲಾದವರು ಉಪಸ್ಥಿತರಿದ್ದು ಸಂವಾದದಲ್ಲಿ ಭಾಗವಹಿಸಿದರು. ಕವಿತಾ ಖಂಡಿಗೆ ವಂದಿಸಿದರು.