ಮಾಲ್ಡೀವ್ಸ್: ಮಾಲ್ಡೀವ್ಸ್ ಸರ್ಕಾರದಿಂದ ಅತ್ಯುನ್ನತ ಗೌರವವಾಗಿರುವ ರೂಲ್ ಆಫ್ ನಿಶಾನ್ ಇಜುದ್ದೀನ್' ಪುರಸ್ಕಾರ ಸ್ವೀಕರಿಸಿ ಅಲ್ಲಿನ ಸಂಸತ್ ನಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಉಗ್ರವಾದದ ವಿರುದ್ಧ ಜಾಗತಿಕ ಸಮಾವೇಶಕ್ಕೆ ಕರೆ ನೀಡಿದ್ದಾರೆ.
ಭಯೋತ್ಪಾದನೆ ಒಂದು ದೇಶದ ಸಮಸ್ಯೆಯಲ್ಲ, ಕೆಲವು ಜನರು ಒಳ್ಳೆಯ ಭಯೋತ್ಪಾದನೆ, ಕೆಟ್ಟ ಭಯೋತ್ಪಾದನೆ ಎಂದು ಭಯೋತ್ಪಾದನೆಯಲ್ಲೂ ವ್ಯತ್ಯಾಸ ಕಾಣುವುದು ದುರದೃಷ್ಟಕರ ಎಂದು ಹೇಳಿದ್ದಾರೆ.
ವಿಶ್ವದ ನಾಯಕರು ಹಾಗೂ ಸಂಸ್ಥೆಗಳು ಭಯೋತ್ಪಾದನೆ ವಿರುದ್ಧವಾಗಿ ಜಾಗತಿಕ ಸಮಾವೇಶ ನಡೆಸುವುದಕ್ಕೆ ಇದು ಸೂಕ್ತ ಸಮಯ ಎಂದು ಮೋದಿ ಹೇಳಿದ್ದಾರೆ.
ಇದೇ ವೇಳೆ ಮಾಲ್ಡೀವ್ಸ್-ಭಾರತದ ಸಂಬಂಧದ ಬಗ್ಗೆಯೂ ಮಾತನಾಡಿರುವ ಮೋದಿ, ಮಾಲ್ಡೀವ್ಸ್ ಜೊತೆ ಭಾರತ ಎಂದಿಗೂ ನಿಲ್ಲಲಿದೆ. ಭಾರತ- ಮಾಲ್ಡೀವ್ಸ್ ನ ಉದ್ಯಮ ಸಂಬಂಧ ಸಿಂಧು ಕಣಿವೆ ನಾಗರಿಕತೆಯ ಲೋಥಲ್ ಪ್ರದೇಶ (ಈಗಿನ ಗುಜರಾತ್ ಪ್ರಾಂತ್ಯಕ್ಕೆ ಸೇರಿದ್ದು) ಅಸ್ತಿತ್ವದಲ್ಲಿದ್ದಾಗಿನಿಂದಲೂ ಇದೆ. ಭಾರತ ಮಾಲ್ಡೀವ್ಸ್ ನ ಫ್ರೈಡೇ ಮಸೀದಿಯ ಸಂರಕ್ಷಣೆಗೆ ಕೊಡುಗೆ ನೀಡಲಿದೆ ಎಂದು ಮೋದಿ ಹೇಳಿದ್ದಾರೆ.