ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಯಲ್ಲಿ ಎರಡು ವರ್ಷಗಳ ಅವಧಿಗೆ ಶಾಶ್ವತವಲ್ಲದ ಸ್ಥಾನಕ್ಕಾಗಿ ಭಾರತದ ಉಮೇದುವಾರಿಕೆಗೆ ಚೀನಾ ಸೇರಿದಂತೆ ಏಷ್ಯಾ ಪೆಸಿಫಿಕ್ ಸಮೂಹದ 53 ದೇಶಗಳು ಸರ್ವಾನುಮತದ ಬೆಂಬಲ ಸೂಚಿಸಿವೆ.
ಇದು ಭಾರತಕ್ಕೆ ತುಂಬಾ ಮಹತ್ವದ ರಾಜತಾಂತ್ರಿಕ ಗೆಲುವು ಮತ್ತು ಜಾಗತಿಕ ಮಟ್ಟದಲ್ಲಿ ತನ್ನ ಪ್ರಾಬಲ್ಯಕ್ಕೆ ದೊರೆತ ಮನ್ನಣೆಯೂ ಆಗಿದೆ.
ಈ ಕುರಿತು ಟ್ವೀಟ್ ಮಾಡಿರುವ ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿತ್ವ ರಾಯಭಾರಿ ಸೈಯದ್ ಅಕ್ಬರುದ್ದೀನ್ ಅವರು, ಎರಡು ವರ್ಷಗಳ ಅವಧಿಗೆ ಭದ್ರತಾ ಮಂಡಳಿಯಲ್ಲಿ ಶಾಶ್ವತರಹಿತ ಸ್ಥಾನ ಪಡೆಯುವ ಭಾರತದ ಉಮೇದುವಾರಿಕೆಯನ್ನು ವಿಶ್ವಸಂಸ್ಥೆಯಲ್ಲಿನ ಏಷ್ಯಾ-ಫೆಸಿಫಿಕ್ ಗುಂಪು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿವೆ ಎಂದು ತಿಳಿಸಿದ್ದಾರೆ. ಅಲ್ಲದೆ ಬೆಂಬಲ ಸೂಚಿಸಿದ 55 ಸದಸ್ಯ ರಾಷ್ಟ್ರಗಳಿಗೆ ಧನ್ಯವಾದ ಹೇಳಿದ್ದಾರೆ.
ಭಾರತಕ್ಕೆ ಚೀನಾ ಬೆಂಬಲ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುಆಂಗ್ ಅವರು, ಭಾರತದ ಸ್ಥಾನ ಮತ್ತು ಅಂತರರಾಷ್ಟ್ರೀಯ ಹಾಗೂ ಪ್ರಾದೇಶಿಕ ವ್ಯವಹಾರಗಳಲ್ಲಿ ಅದರ ಪಾತ್ರವನ್ನು ನಾವು ಗೌರವಿಸುತ್ತೇವೆ ಮತ್ತು ಅಂತರರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಭಾರತದ ಸಕಾರಾತ್ಮಕ ಕೊಡುಗೆಯನ್ನು ಎದುರು ನೋಡುತ್ತೇವೆ ಎಂದು ಅವರು ಹೇಳಿದ್ದಾರೆ.
ವಿಶ್ವಸಂಸ್ಥೆಯ 15 ಸದಸ್ಯ ರಾಷ್ಟ್ರಗಳ ಭದ್ರತಾ ಮಂಡಳಿಗೆ 2021-22ನೇ ಅವಧಿಗಾಗಿ ಐದು ಶಾಶ್ವತರಹಿತ ಸದಸ್ಯರ ಹುದ್ದೆಗಾಗಿ ಮುಂದಿನ ವರ್ಷ ಜೂನ್ ನಲ್ಲಿ ಚುನಾವಣೆ ನಡೆಯಲಿದೆ. ಭಾರತಕ್ಕೆ ಏಷ್ಯಾ ಪೆಸಿಫಿಕ್ ದೇಶಗಳ 55 ದೇಶಗಳು ಒಮ್ಮತದ ಬೆಂಬಲ ಸೂಚಿಸಿರುವುದು ಪ್ರಮುಖ ಬೆಳವಣಿಗೆಯಾಗಿದೆ.
ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಚೀನಾ, ಇಂಡೋನೆಷ್ಯಾ, ಇರಾನ್, ಜಪಾನ್, ಕುವೈತ್, ಕಿರ್ಜಿಸ್ತಾನ್, ಮಲೇಷ್ಯಾ, ಮಾಲ್ಡಿವ್ಸ್, ಮ್ಯಾನ್ಮಾರ್, ನೇಪಾಳ್, ಪಾಕಿಸ್ತಾನ, ಕತಾತ್, ಸೌದಿ ಅರೇಬಿಯಾ, ಶ್ರೀಲಂಕಾ, ಸಿರಿಯಾ, ಟರ್ಕಿ, ಯುಎಇ ಮತ್ತು ಯೆಟ್ನಾಂ ಸೇರಿದಂತೆ 55 ದೇಶಗಳು ಭಾರತದ ಪರ ಒಮ್ಮತದ ಬೆಂಬಲ ದೃಢೀಕರಿಸಿವೆ.