ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತಿ ವತಿಯಿಂದ ಮಾನ್ಯ ಜ್ಞಾನೋದಯ ಹಿರಿಯ ಪ್ರಾಥಮಿಕ ಶಾಲೆಗೆ ಮಂಜೂರುಗೊಳಿಸಿದ ಮಹಿಳಾ ಶೌಚಾಲಯವನ್ನು ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಉದ್ಘಾಟಿಸಿದರು.
ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ಅವರು ಮಾತನಾಡಿ, ಜಿಲ್ಲೆಯ 38 ಗ್ರಾಮ ಪಂಚಾಯತಿಗಳಲ್ಲಿ ಬದಿಯಡ್ಕ ಗ್ರಾಮಪಂಚಾಯತಿಯಲ್ಲಿ ಮಾತ್ರ ಅಂಗೀಕೃತ ಶಾಲೆಗಳಿಗೂ ಸರ್ಕಾರಿ ಶಾಲೆಗಳಂತೆ ಎಲ್ಲ ಸೌಲಭ್ಯಗಳನ್ನು ನೀಡಲಾಗಿದೆ. ಈ ಶೌಚಾಲಯವನ್ನು ಸದುಪಯೋಗಪಡಿಸುವುದಲ್ಲದೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಾಗಿದೆ ಎಂದರು.
ಬದಿಯಡ್ಕ ಗ್ರಾಮಪಂಚಾಯತಿ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾನ್ಯ ಶಾಲೆಯು ಊರಿನ ಹೆಮ್ಮೆಯ ಶಿಕ್ಷಣ ಸಂಸ್ಥೆಯಾಗಿದ್ದು, ಇಲ್ಲಿನ ಅಭಿವೃದ್ಧಿಗೆ ಪೂರಕವಾಗಿ ಗ್ರಾಮಪಂಚಾಯತಿ ಬೆಂಬಲವನ್ನು ನೀಡುತ್ತಿದೆ ಎನ್ನಲು ಹೆಮ್ಮೆಯೆನಿಸುತ್ತದೆ ಎಂದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸತೀಶ ಶುಭಹಾರೈಸಿದರು. ಶಾಲಾ ವ್ಯವಸ್ಥಾಪಕ ನಿತ್ಯಾನಂದ ಮಾನ್ಯ, ಅಧ್ಯಾಪಕ ವೃಂದ, ರಕ್ಷಕರು ಹಾಗೂ ವಿದ್ಯಾರ್ಥಿಗಳು ಜೊತೆಗಿದ್ದರು. ಶಾಲಾ ಮುಖ್ಯೋಪಾಧ್ಯಾಯ ಟಿ.ಗೋವಿಂದನ್ ನಂಬೂದಿರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅಧ್ಯಾಪಕ ರೆಜು ವಂದಿಸಿದರು.