ಬದಿಯಡ್ಕ: ಜಗತ್ತಿನ ಸರ್ವ ಜೀವಜಾಲಗಳ ಒಳಿತನ್ನು ಬಯಸಿ ವ್ಯವಸ್ಥೆಗಳನ್ನು ನಿರೂಪಿಸಿದ ವೇದಗಳು ಅಪಾರ ಜ್ಞಾನ ರಾಶಿಯ ಸಾಗರವಾಗಿದೆ. ಚತುರ್ವೇದಗಳಾಗಿ ವಿಭಾಗಿಸಲ್ಪಟ್ಟಿರುವ ವೇದಗಳ ಸರ್ವಸಾರವನ್ನೂ ಏಕೀಕರಣಗೊಳಿಸಿದ ಮಹತ್ವದ ಸಂದೇಶವಾದ ಶ್ರೀಮದ್ ಭಗವದ್ಗೀತೆ ಯಾವ ಕಾಲಕ್ಕೂ ಸಲ್ಲುವ ಸಂದೇಶಗಳ ಮಹಾ ಘನಿಯಾಗಿ ಬೆಳಕಿನ ದಾರಿ ತೋರಿಸುತ್ತದೆ ಎಂದು ಚಿನ್ಮಯಾ ಮಿಷನ್ ಕೇರಳ ವಿಭಾಗದ ಪ್ರಮುಖರಾದ ಶ್ರೀವಿವಿಕ್ತಾನಂದ ಸರಸ್ವತೀ ಸ್ವಾಮೀಜಿ ಅವರು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
ಮಾನ್ಯ ಜ್ಞಾನೋದಯ ಶಾಲಾ ಪರಿಸರದಲ್ಲಿ ಸೋಮವಾರದಿಂದ ವೃಂದಾವನ ಬಾಲಗೋಕುಲ ಮಾನ್ಯ, ಹಿಂದೂ ಐಕ್ಯವೇದಿ ಮಾನ್ಯ ಘಟಕಗಳು ಕಾಸರಗೋಡಿನ ಚಿನ್ಮಯ ಮಿಷನ್ ಸಹಕಾರದೊಂದಿಗೆ ಮಾನ್ಯ ಶಾಲಾ ಪರಿಸರದಲ್ಲಿ ಆಯೋಜಿಸಿರುವ ಗೀತಾಜ್ಞಾನ ಯಜ್ಞ ಸರಣಿ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನಗೈದು ಮಾತನಾಡಿದರು.
ಹಿಂದೂ ಐಕ್ಯವೇದಿಯ ಜಿಲ್ಲಾ ಕೋಶಾಧಿಕಾರಿ ವಾಮನ ಆಚಾರ್ಯ ಬೋವಿಕ್ಕಾನ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಸನಾತನ ಧರ್ಮದ ವಿಸ್ತಾರತೆ, ಜಟಿಲ ಜೀವನ ಸಂಕಷ್ಟಗಳಿಂದ ಮುಕ್ತರಾಗುವ ಸಂದೇಶಗಳ ಸಹಿತ ಸಮಗ್ರ ಬದುಕಿನ ರಹದಾರಿಯನ್ನು ತಿಳಿಸುವ ಭಗವದ್ಗೀತೆಯ ಅರಿವನ್ನು ಪಸರಿಸುವ ನಿಟ್ಟಿನಲ್ಲಿ ಇಂತಹ ಸರಣಿ ಕಾರ್ಯಕ್ರಮಗಳು ಎಲ್ಲೆಡೆ ಆಗಬೇಕು ಎಂದು ತಿಳಿಸಿದರು.
ಹಿಂದೂ ಐಕ್ಯವೇದಿಯ ಮಾನ್ಯ ಘಟಕಾಧ್ಯಕ್ಷ ನವೀನಚಂದ್ರ ಮಾಸ್ತರ್ ಮಾನ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಭಗವದ್ ಸಂದೇಶಗಳ ನಿತ್ಯ ಮನನವು ಜೀವನವನ್ನು ಉತ್ಸಾಹಗೊಳಿಸಿ ಕರ್ತವ್ಯ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ. ಹಿಂದೂ ಧರ್ಮದ ಶಾಂತಿ, ಸಮೃದ್ದಿಗೆ ಸತ್ಪಥದ ಜೀವನ ಮಾರ್ಗವೊಂದೇ ಪರಿಹಾರ ಎಂದು ತಿಳಿಸಿದರು.
ಮಾನ ಮಾಸ್ತರ್ ಉಪಸ್ಥಿತರಿದ್ದು ಶುಭಹಾರೈಸಿದರು. ಮಧುಚಂದ್ರ ಮಾನ್ಯ ಸ್ವಾಗತಿಸಿ, ಹರ್ಷಿತಾ ಪುರುಷೋತ್ತಮನ್ ವಂದಿಸಿದರು. ಶಿಕ್ಷಕ ನಾರಾಯಣ ಆಸ್ರ ಕಾರ್ಯಕ್ರಮ ನಿರೂಪಿಸಿದರು. ಜೂ.21ರ ವರೆಗೆ ಮಾನ್ಯದಲ್ಲಿ ಪ್ರತಿನಿತ್ಯ ಸಂಜೆ 7ರಿಂದ 8.30ರ ವರೆಗೆ ನಡೆಯಲಿದೆ.