ಮುಳ್ಳೇರಿಯ: ಮುಳಿಯಾರು ಶ್ರೀಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರ ದ್ರವ್ಯಕಲಶ ಮಹೋತ್ಸವದ ಧಾರ್ಮಿಕ- ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಯಕ್ಷಬಳಗ ಮುಳಿಯಾರು ಇದರ ದ್ವಿತೀಯ ವಾರ್ಷಿಕೋತ್ಸವ ಶ್ರೀಕ್ಷೇತ್ರ ಸನ್ನಿಧಾನದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಯಕ್ಷಬಳಗ ಮುಳಿಯಾರಿನ ಯಕ್ಷಗಾನ ಗುರುಗಳಾದ ಅಡ್ಕ ಕೃಷ್ಣ ಭಟ್, ಈಶ್ವರ ಭಟ್ ಬಳ್ಳಮೂಲೆ ಮತ್ತು ವಿದುಷಿ, ಸಾಹಿತಿ, ಭರತನಾಟ್ಯ ಶಿಕ್ಷಕಿ ಅನುಪಮಾ ರಾಘವೇಂದ್ರ ಉಡುಪುಮೂಲೆ ಇವರನ್ನು ಯಕ್ಷತೂಣೀರ ಸಂಪ್ರತಿಷ್ಠಾನ ಕೋಟೂರು ಇವರ ವತಿಯಿಂದ ಸನ್ಮಾನಿಸಲಾಯಿತು. ಸೀತಾರಾಮ ಬಳ್ಳುಳ್ಳಾಯ ಇವರು ಶಾಲುಹೊದೆಸಿ, ಫಲ, ಸ್ಮರಣಿಕೆಗಳನ್ನಿತ್ತು ಗೌರವಿಸಿದರು.
ದ್ರವ್ಯಕಲಶೋತ್ಸವ ಸಮಿತಿ ಅಧ್ಯಕ್ಷ ವೇಣುಗೋಪಾಲ ತತ್ವಮಸಿ, ರಾಘವೇಂದ್ರ ಉಡುಪುಮೂಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮುರಳಿ ಸ್ಕಂದ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ.ಶಿವಕುಮಾರ್ ಅಡ್ಕ ಸ್ವಾಗತಿಸಿ, ಸುಬ್ರಹ್ಮಣ್ಯ ಭಟ್ ಅಡ್ಕ ವಂದಿಸಿದರು. ಗೋವಿಂದ ಬಳ್ಳಮೂಲೆ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಯಕ್ಷಬಳಗ ಮುಳಿಯಾರು ಇವರಿಂದ ' ಕೃಷ್ಣಲೀಲಾ ಕಂಸವಧೆ ' ಮತ್ತು ಯಕ್ಷತೂಣೀರ ಸಂಪ್ರತಿಷ್ಠಾನ ಕೋಟೂರು ಇವರಿಂದ ' ಗದಾಯುದ್ಧ ' ಯಕ್ಷಗಾನ ಬಯಲಾಟವು ಜರಗಿತು.