ಬದಿಯಡ್ಕ: ದೇಶಕ್ಕಾಗಿ ತನ್ನ ಬದುಕನ್ನು ಮೀಸಲಾಗಿರಿಸಿದ ಕಮಾಂಡೋ ಶ್ಯಾಮ್ ರಾಜ್ ಶನಿವಾರ ಬದಿಯಡ್ಕದಲ್ಲಿ ನಡೆದ ಹಲಸುಮೇಳಕ್ಕೆ ಭೇಟಿಯಿತ್ತು ದೊಡ್ಡ ಗಾತ್ರದ ಹಲಸಿನ ಕಾಯಿಯನ್ನು ಎತ್ತಲು ಪ್ರಯತ್ನಿಸಿ ಸಂಘಟಕರಿಗೆ ಸ್ಪೂರ್ತಿಯಾದರು.
ಮೂಲತಃ ಕಾಸರಗೋಡು ಜಿಲ್ಲೆಯ ಎಡನೀರು ನಿವಾಸಿಯಾದರೂ ಇವರು ಪ್ರಸ್ತುತ ಪುಣೆಯಲ್ಲಿ ವಾಸವಾಗಿದ್ದಾರೆ. ದೇಶ ಸೇವೆಯ ಕರ್ತವ್ಯದಲ್ಲಿದ್ದಾಗ ಬೆನ್ನುಹುರಿಗೆ ಪೆಟ್ಟಾಗಿ ಗಾಲಿಕುರ್ಚಿಯನ್ನೇ ತನ್ನ ಬದುಕಿನ ಅಂಗವಾಗಿಸಿದ ಶ್ಯಾಮ್‍ರಾಜ್ ಅವರಿಗೆ ಪರಸಹಾಯವಿಲ್ಲದೆ ಎಲ್ಲಿಗೂ ಪ್ರಯಾಣಿಸಲು ಅಸಾಧ್ಯ. ಕೈ ಹಾಗೂ ಕಾಲುಗಳಿಗೆ ಬಲವಿಲ್ಲದಿದ್ದರೂ, ಹಲಸು ಮೇಳದಲ್ಲಿ ಜೊತೆಗೂಡಿದ ತನ್ನ ಸಹಪಾಠಿಗಳೊಂದಿಗೆ ಎಲ್ಲಾ ಮಳಿಗೆಗಳಿಗೂ ಭೇಟಿಯಿತ್ತರು. ಎಲ್ಲವನ್ನೂ ವೀಕ್ಷಿಸಿ, ಆತ್ಮೀಯರ ಜೊತೆಗೆ ಒಂದಿಷ್ಟು ಪೆÇೀಟೋ ಕ್ಲಿಕ್ಕಿಸಿ, ಮೇಳದ ಸ್ಮರಣಾರ್ಥ ಹಲಸಿನಕಾಯಿಗಳನ್ನೂ ಕೊಂಡೊಯ್ದಾಗ ಸಂಘಟಕರಿಗೆ ಹೆಮ್ಮೆಯೆನಿಸಿತು. ತುರ್ತು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲೆಂದು ಅನಿರೀಕ್ಷಿತವಾಗಿ ಊರಿಗೆ ಬಂದ ಶ್ಯಾಮ್‍ರಾಜ್‍ಗೆ ಇಲ್ಲಿ ನಡೆಯುವ ಹಲಸಿನ ಮೇಳದ ಬಗ್ಗೆ ತಿಳಿದಾಗ ಅದನ್ನು ನೋಡುವ ಆಸಕ್ತಿ ಉಂಟಾಯಿತು. ಕುಲಗುರುಗಳಾದ ಶ್ರೀ ಶ್ರೀ ರಾಘವೇಶ್ವರ ಭಾರತೀ ಶ್ರೀಗಳ ಬಗ್ಗೆ ಅಪಾರ ಗೌರವ ಹೊಂದಿರುವ ಶ್ರೀಯುತರು ತನ್ನ ಮಹೋನ್ನತ ಕಲ್ಪನೆಯ ಸಾಕಾರ ರೂಪವಾದ ಗೋ ಸಂರಕ್ಷಣೆಯ ಬಗ್ಗೆ ಅತೀವ ಕಾಳಜಿ ಹೊಂದಿ, ತನ್ನ ಪ್ರಯಾಣವನ್ನು ಎರಡು ದಿನ ಮುಂದಕ್ಕೆ ಹಾಕಿ ಹಲಸಿನಮೇಳಕ್ಕೆ ಆಗಮಿಸಿದ್ದರು. ಕಾಸರಗೋಡಿನ ಬಿಸಿಲಿನ ವಾತಾವರಣಕ್ಕೆ ದೇಹ ಒಗ್ಗುವುದು ಕಷ್ಟವಾಗುತ್ತಿದ್ದರೂ ತನ್ನ ನೋವುಗಳನ್ನು ಕಡೆಗಣಿಸಿ ಕೆಲವು ಗಂಟೆಗಳ ಹೊತ್ತಾದರೂ ಹಲಸಿನ ಮೇಳದಲ್ಲಿ ಭಾಗವಹಿಸಿದ ಕಮಾಂಡೋ ಶ್ಯಾಮ್ ರಾಜ್ ನಿಜಕ್ಕೂ ಭಾರತದ ಹೆಮ್ಮೆಯ ಪುತ್ರ. ಇತ್ತೀಚೆಗೆ ವಿಶ್ವ ಹವ್ಯಕ ಸಮ್ಮೇಳನದಲ್ಲಿ ನಿವೃತ್ತ ಯೋಧರನ್ನು ಸನ್ಮಾನಿಸಿ ಗೌರವಿಸುವ ಸಂದರ್ಭದಲ್ಲಿ ಶ್ಯಾಮ್‍ರಾಜ್ ಅವರನ್ನೂ ಸನ್ಮಾನಿಸಲಾಗಿತ್ತು ಎಂಬುದು ಗಮನಾರ್ಹ.