ಬಿಶ್ಕೆಕ್(ಕಿರ್ಗಿಸ್ತಾನ): ಶಾಂಘೈ ಸಹಕಾರ ಸಂಘದ ಶೃಂಗಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಜೊತೆ ನಡೆಸಿದ ಮಾತುಕತೆ ಅತ್ಯಂತ ಫಲಪ್ರದವಾಗಿದೆ.
ಬಿಶ್ಕೆಕ್ ನಲ್ಲಿ ಶಾಂಘೈ ಸಹಕಾರ ಸಂಘದ ಶೃಂಗಸಭೆ ನಡೆಯುತ್ತಿದ್ದು, ನರೇಂದ್ರ ಮೋದಿ ಅವರು 2ನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ರನ್ನು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವ ಸಂಬಂಧ ನಡೆಸಿದ ಮಾತುಕತೆ ನಡೆಸಿದರು.
ಪ್ರಧಾನಿ ಮೋದಿ ಅವರ ಮೊದಲ ಅವಧಿಯಲ್ಲಿ ಕ್ಸಿ ಜಿಂಗ್ ಪಿಂಗ್ ರನ್ನು 10 ಬಾರಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಪ್ರಸ್ತುತ ಉಭಯ ದೇಶಗಳು ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಸಲು ಹೆಚ್ಚಿನ ಒತ್ತು ನೀಡಿವೆ.
ಮಾತುಕತೆ ವೇಳೆ ಪ್ರಧಾನಿ ಮೋದಿ ಅವರು ಕ್ಸಿ ಜಿನ್‍ಪಿಂಗ್ ಅವರನ್ನು ಭಾರತಕ್ಕೆ ಬರುವಂತೆ ಆಹ್ವಾನ ನೀಡಿದ್ದು ಮೋದಿ ಆಹ್ವಾನವನ್ನು ಸ್ವೀಕರಿಸಿರುವ ಜಿನ್‍ಪಿಂಗ್ ಈ ವರ್ಷ ಭಾರತಕ್ಕೆ ಭೇಟಿ ನೀಡುವ ಕುರಿತು ಉತ್ಸಾಹ ತೋರಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ವಿಜಯ್ ಗೋಖಲೆ ತಿಳಿಸಿದ್ದಾರೆ.
ಅಮೆರಿಕ ನಡುವಿನ ವ್ಯಾಪಾರ ವಹಿವಾಟು ಸಂಬಂಧ ಚೀನಾದ ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಶಾಂಘೈ ಸಹಕಾರ ಸಂಘಟನೆಯ ಸದಸ್ಯ ರಾಷ್ಟ್ರಗಳನ್ನು ಒಗ್ಗೂಡಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಯ ವಿರುದ್ಧ ಧ್ವನಿಯೆತ್ತಲು ಚೀನಾ ಪ್ರಯತ್ನಿಸುತ್ತಿದೆ. ಇನ್ನು ಡೊನಾಲ್ಡ್ ಟ್ರಂಪ್ ನೀತಿಗಳ ಕುರಿತು ಭಾರತ ಏನು ನಿರ್ಣಯ ತೆಗೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.
ಕ್ಸಿ ಜಿನ್‍ಪಿಂಗ್ ಜೊತೆಗಿನ ಮಾತುಕತೆ ವೇಳೆ ಪ್ರಧಾನಿ ಮೋದಿ ಪಾಕ್ ಪೋಷಿತ ಭಯೋತ್ಪಾದನೆ ಕುರಿತು ಧ್ವನಿಯೆತ್ತಿದರು. ಇನ್ನು ಭಯೋತ್ಪಾದನೆ ವಿರುದ್ಧ ಪಾಕಿಸ್ತಾನ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಬೇಕು. ಭಯೋತ್ಪಾದನೆಯಿಂದ ಭಾರತಕ್ಕೆ ತೊಂದರೆಯಾಗುತ್ತಿದೆ. ಇದರಿಂದ ಉಭಯ ದೇಶಗಳ ನಡುವೆ ಶಾಂತಿ ಮಾತುಕತೆ ಕಷ್ಟ ಎಂದು ಹೇಳಿದರು.