ತಿರುವನಂತಪುರ:ಕೋಟ್ಟಯಂನ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಇಲ್ಲದೆ ಮಹಿಳೆಗೆ ವೈದ್ಯರು ಕಿಮೋಥೆರಪಿ ಚಿಕಿತ್ಸೆ ನೀಡಿದ ಆಘಾತಕಾರಿ ಘಟನೆ ನಡೆದಿದೆ.
ಕೊಟ್ಟಾಯಂನ 38 ವರ್ಷದ ರಜನಿ ಎಂಬ ಮಹಿಳೆಗೆ ಕ್ಯಾನ್ಸರ್ ಇಲ್ಲದಿದ್ದರೂ ವೈದ್ಯರು ಕಿಮೋಥೆರಪಿ ನೀಡಿದ್ದಾರೆ. ರಜನಿ ಅವರ ಸ್ತನದಲ್ಲಿ ಗಂಟು ಕಾಣಿಸಿಕೊಂಡಿತ್ತು. ಈ ಸಂಬಂಧ ಅವರು ಖಾಸಗಿ ಆಸ್ಪತ್ರೆಯಲ್ಲಿ ಟಿಶ್ಯೂ ಪರೀಕ್ಷೆ ಮಾಡಿಸಿದ್ದು, ಅದರಲ್ಲಿ ಕ್ಯಾನ್ಸರ್ ಇದೆ ಎಂಬ ವರದಿ ಬಂದಿದೆ. ಈ ವರದಿ ಆಧಾರದ ಮೇಲೆ ಸರ್ಕಾರಿ ಆಸ್ಪತ್ರೆ ವೈದ್ಯರು ಕೀಮೊಥೆರಪಿ ಮಾಡಿದ್ದರಂತೆ.
ಚಿಕಿತ್ಸೆಗೆಂದು ಮಹಿಳೆ ಕೊಟ್ಟಾಯಂನ ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿ ಖಾಸಗಿ ಲ್ಯಾಬ್ ವರದಿ ಆಧರಿಸಿ ಕಿಮೋಥೆರಪಿ ಚಿಕಿತ್ಸೆಯನ್ನೂ ನೀಡಿದ್ದಾರೆ. ಎರಡು ವಾರಗಳ ಕಾಲ ಚಿಕಿತ್ಸೆ ನಡೆದಿದೆ. ನಂತರ ಸರ್ಕಾರಿ ಆಸ್ಪತ್ರೆ ಲ್ಯಾಬ್ ನಲ್ಲಿ ಮಹಿಳೆಗೆ ಕ್ಯಾನ್ಸರ್ ಇಲ್ಲವೆಂದು ವರದಿ ನೀಡಲಾಗಿದೆ.
ಮಹಿಳೆ ಇನ್ನೂ ಎರಡು ಕಡೆ ಪರೀಕ್ಷೆ ನಡೆಸಿದ್ದಾಳೆ. ಅಲ್ಲಿಯೂ ಕ್ಯಾನ್ಸರ್ ಇಲ್ಲವೆಂಬ ವರದಿ ಬಂದಿದೆ. ಈ ಬಗ್ಗೆ ಮಹಿಳೆ ದೂರು ನೀಡಿದ್ದಾಳೆ. ಕೀಮೊಥೆರಪಿ ನಂತರ ಮಹಿಳೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಈ ಕುರಿತು ಕೇರಳ ಆರೋಗ್ಯ ಸಚಿವರು ತನಿಖೆಗೆ ಆದೇಶಿಸಿದ್ದಾರೆ.
ಇಲ್ಲದ ರೋಗಕ್ಕೆ ಈ ಚಿಕಿತ್ಸೆ ಪಡೆದ ಮಹಿಳೆ ರಜನಿ ಅವರಿಗೆ ಈಗ ಕೂದಲೆಲ್ಲ ಉದುರಿದೆ. ಹಾಗೇ ದೀರ್ಘಕಾಲದ ಅಸ್ವಸ್ಥತೆಯಿಂದ ಬಳಲುತ್ತಿದ್ದು ಕೆಲಸಕ್ಕೆ ಹೋಗಲೂ ಸಾಧ್ಯವಾಗುತ್ತಿಲ್ಲ.
ರಜನಿ ಅವರಿಗೆ 8 ವರ್ಷದ ಮಗಳಿದ್ದಾಳೆ. ಅಲ್ಲದೆ ವಯಸ್ಸಾದ ತಂದೆ-ತಾಯಿಯೂ ಇವರ ಜೊತೆಗೇ ಇದ್ದು ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ಹೊತ್ತಿದ್ದಾರೆ. ಕುಟುಂಬದಲ್ಲಿ ಇವರೊಬ್ಬರೇ ದುಡಿಯುವವರಾಗಿದ್ದರು. ಈಗ ಅನಾರೋಗ್ಯದಿಂದ ಏನೂ ಮಾಡಲಾಗುತ್ತಿಲ್ಲ. ರಜನಿ ಈಗ ಆಸ್ಪತ್ರೆ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.