ಕಾಸರಗೋಡು: ಎಂಡೋಸಲಾನ್ ಪ್ಯಾಕೇಜ್‍ನಲ್ಲಿ ಒಳಪಡಿಸಿ ಕಾಸರಗೋಡು ಜನರಲ್ ಆಸ್ಪತ್ರೆಯ ಸಮುಚ್ಛಯದಲ್ಲಿ ಆರಂಭಿಸಲಾಗಿದ್ದ ನೂತನ ಕಟ್ಟಡ ನಿರ್ಮಾಣದ ಕಾಮಗಾರಿಯು ಸ್ಥಗಿತಗೊಂಡಿದೆ. ಫಂಡ್ ಲಭಿಸದಿರುವುದೇ ಕಟ್ಟಡ ನಿರ್ಮಾಣವು ಸ್ಥಗಿತಗೊಳ್ಳಲು ಕಾರಣವೆನ್ನಲಾಗಿದೆ.
ಎಂಟು ಕೋಟಿ ರೂ. ವೆಚ್ಚದಲ್ಲಿ ಇಲ್ಲಿ ಏಳು ಅಂತಸ್ತಿನ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿತ್ತು. ಮೂರು ವರ್ಷಗಳ ಹಿಂದೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶಿಲಾನ್ಯಾಸ ನಡೆಸಿದ ಈ ಕಟ್ಟಡದ ನಿರ್ಮಾಣ ಕಾರ್ಯವು ಕಳೆದ ವರ್ಷ ಆರಂಭಗೊಂಡಿತ್ತು. ಜನರಲ್ ಆಸ್ಪತ್ರೆಯ ಹಳೆಯ ಬ್ಲಾಕ್‍ಗಳನ್ನು ಮುರಿದು ಅಲ್ಲಿ ಏಳು ಅಂತಸ್ತಿನ ನೂತನ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು.
ಇಲ್ಲಿ ಸಕಲ ಸೌಲಭ್ಯವಿರುವ ಕಟ್ಟಡವನ್ನು ನಿರ್ಮಿಸಲು ನಿರ್ಧರಿಸಲಾಗಿತ್ತು. ಜನರಲ್ ಆಸ್ಪತ್ರೆಯ ಹೊಣೆಗಾರಿಕೆಯು ಕಾಸರಗೋಡು ನಗರ ಸಭೆಗಿದ್ದು, ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಆರೋಗ್ಯ ಇಲಾಖೆಯು ಟೆಂಡರ್ ಕರೆದಿತ್ತು.
ಈ ನಡುವೆ ಪ್ರಸ್ತುತ ಕಟ್ಟಡದ ನಿರ್ಮಾಣ ಕಾರ್ಯ ಸರಿಯಾದ ರೀತಿಯಲ್ಲಿ ಪ್ರಾರಂಭವಾಗಿಲ್ಲ. ಅಲ್ಲದೆ ಬಿಲ್ ಮಂಜೂರುಗೊಳ್ಳುವುದರಲ್ಲಿ ವಿಳಂಬಗೊಂಡಿರುವುದೇ ಕಟ್ಟಡ ನಿರ್ಮಾಣ ಸ್ಥಗಿತಗೊಳ್ಳಲು ಕಾರಣವಾಗಿದೆ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ಇದರಿಂದಾಗಿ ಎಂಡೋಸಲ್ಫಾನ್ ರೋಗಿಗಳ ಸಹಿತ ನೂರಾರು ಮಂದಿ ಬಡರೋಗಿಗಳು ತೀವ್ರ ಸಂಕಷ್ಟಕ್ಕೆ ಒಳಗಾಗಲಿದ್ದಾರೆ.