ಜಪಾನ್:ಕಾರು ಉತ್ಪಾದನೆಗಾಗಿ ಜೊತೆಗೂಡುವುದರಿಂದ ಬುಲೆಟ್ ಟ್ರೈನ್ ಉತ್ಪಾದನೆಗಾಗಿ ಜೊತೆಗೂಡುವುದರ ವರೆಗೂ ಭಾರತ- ಜಪಾನ್ ದ್ವಿಪಕ್ಷೀಯ ಸಂಬಂಧ ಬಲಿಷ್ಠವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿರುವರು.
ಜಪಾನ್ ನಲ್ಲಿರುವ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಜಪಾನ್ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದ್ದಾರೆ.
ಭಾರತ ಮುಂದಿನ 5 ವರ್ಷಗಳಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವುದರತ್ತ ಗುರಿ ಹೊಂದಿದ್ದು, ಭಾರತ-ಜಪಾನ್ ನಡುವಿನ ಸಂಬಂಧ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಂದು ಕಾಲದಲ್ಲಿ ಭಾರತ ಕಾರು ಉತ್ಪಾದನೆಗಾಗಿ ಜಪಾನ್ ನೊಂದಿಗೆ ಜೊತೆಗೂಡಿತ್ತು. ಇಂದು ನಾವು ಬುಲೆಟ್ ಟ್ರೈನ್ ವ್ಯವಸ್ಥೆ ನಿರ್ಮಾಣಕ್ಕಾಗಿ ಜೊತೆಗೂಡಿದ್ದೇವೆ ಎಂದು ಜಿ 20 ಶೃಂಗಸಭೆಯಲ್ಲಿ ಭಾಗವಹಿಸುವುದಕ್ಕೆ ಜಪಾನ್ ಗೆ ಭೇಟಿ ನೀಡಿರುವ ಮೋದಿ ಹೇಳಿದ್ದಾರೆ.
ಭಾರತದಲ್ಲಿ ಜಪಾನ್ ನ ಯೋಜನೆ, ಹೂಡಿಕೆಗಳು ತನ್ನ ಗುರುತನ್ನು ಹೊಂದದೇ ಇರುವ ಕ್ಷೇತ್ರಗಳಿಲ್ಲ. ಅದೇ ರೀತಿಯಲ್ಲಿ ಪ್ರತಿಭೆ ಹಾಗೂ ಮಾನವಶಕ್ತಿಯಿಂದ ಭಾರತ ಜಪಾನ್ ನ್ನು ಬಲಪಡಿಸಲು ಕೊಡುಗೆ ನೀಡುತ್ತಿದೆ ಎಂದು ಮೋದಿ ಹೇಳಿದ್ದಾರೆ.