ಪೆರ್ಲ: ಇಂದಿನ ವಿದ್ಯಾರ್ಥಿಗಳು ಬಹಳ ಪ್ರತಿಭಾವಂತರಾಗಿದ್ದಾರೆ. ಆದರೆ ಓದುವ ಹವ್ಯಾಸ ಕಡಿಮೆಯಾಗಿರುವುದು ಬಹಳ ಆತಂಕಕಾರಿಯಾದ ವಿಷಯವಾಗಿದೆ. ಅದೇ ರೀತಿ ಸಾಮಾಜಿಕ ಜಾಲತಾಣದ ದುರುಪಯೋಗ ವಿದ್ಯಾರ್ಥಿಗಳ ಭವಿಷ್ಯಕ್ಕೆ ವ್ಯತಿರಿಕ್ತವಾಗಿ ಬಾಧಿಸಲಿದೆ ಎಂದು ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಸಂಜೀವ ರೈ ಅಭಿಪ್ರಾಯಪಟ್ಟರು.
ಅವರು ಇತ್ತೀಚೆಗೆ ನಡೆದ ಶಾಲಾ ಪ್ರವೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ನಿರಂತರವಾಗಿ ಅಧ್ಯಯನಶೀಲರಾಗಿ ತನ್ನ ಜ್ಞಾನವನ್ನು ಓದುವಿಕೆಯ ಮೂಲಕ ಹೆಚ್ಚಿಸಿಕೊಳ್ಳುವುದು, ಅದರೊಂದಿಗೆ ಅಧ್ಯಾಪಕರು ಸೂಕ್ತವಾದ ಮಾರ್ಗದರ್ಶನವನ್ನು ನೀಡುವುದು, ಹೆತ್ತವರು ತನ್ನ ಮಗು ಏನು ಮಾಡುತ್ತಿದೆ ಎಂಬ ಗಮನವಿರಿಸುವುದು ವಿದ್ಯಾರ್ಥಿಗಳ ಗುರಿ ತಲುಪುವುದಕ್ಕೆ ಸಹಕಾರಿಯಾಗುವುದು ಎಂದು ಅವರು ತಿಳಿಸಿದರು. ಅವರು ಹೊಸದಾಗಿ ಶಾಲೆಗೆ ಸೇರಿದ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಶುಭಕೋರಿದರು.
ಪ್ರಾಂಶುಪಾಲ ಪದ್ಮನಾಭ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ ವಿದ್ಯಾರ್ಥಿಗಳು ಶಿಸ್ತಿನಿಂದ ಕಲಿಯಬೇಕು. ಯಾವಾಗ ವಿದ್ಯಾಭ್ಯಾಸ ಶಿಸ್ತಿನಿಂದ ಕೂಡಿರುತ್ತದೆಯೋ ಅಂದು ಅದು ಅರ್ಥಪೂರ್ಣವಾಗುತ್ತದೆ ಎಂದು ಅವರು ತಿಳಿಸಿದರು. ಅವರು 100 ಶೇಕಡಾ ಫಲಿತಾಂಶ ಪಡೆದ ಹೈಸ್ಕೂಲು ವಿಭಾಗ ಹಾಗು ಅತ್ಯುತ್ತಮ ಸಾಧನೆ ಮಾಡಿದ ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳನ್ನು ಗೌರವಿಸಿದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮಚಂದ್ರ ಮಣಿಯಾಣಿ ಮಾತನಾಡಿ ಕಾಟುಕುಕ್ಕೆಯ ಈ ವಿದ್ಯಾಸಂಸ್ಥೆ ಇನ್ನಷ್ಟು ಪ್ರತಿಭೆಗಳನ್ನು ಸಮಾಜಕ್ಕೆ ನೀಡಲಿ ಎಂದು ಶುಭ ಹಾರೈಸಿದರು. ಪ್ರವೇಶೋತ್ಸವದ ಮುಖ್ಯಮಂತ್ರಿಯ ಸಂದೇಶವನ್ನು ಮುಖ್ಯೋಪಾಧ್ಯಾಯರಾದ ಸುಧೀರ್ ಕುಮಾರ್ ರೈ ವಾಚಿಸಿದರು. ಹೈಸ್ಕೂಲ್ ಹಾಗು ಹೈಯರ್ ಸೆಕೆಂಡರಿ ವಿಲೀನದ ಬಗ್ಗೆ ಸಂದೀಪ್ ಕುಮಾರ್ ಮಾಹಿತಿ ನೀಡಿದರು. ನೂರು ಶೇಕಡಾ ಫಲಿತಾಂಶ ಪಡೆದ ಜಿಲ್ಲಾ ಪಂಚಾಯತಿ ಸ್ಮರಣಿಕೆಯನ್ನು ಅಧ್ಯಕ್ಷರು ಶಾಲಾ ಮುಖ್ಯಸ್ಥರಿಗೆ ಹಸ್ತಾಂತರಿಸಿದರು. ರಾಜೇಶ್ ಸಿ.ಎಚ್. ಕಾರ್ಯಕ್ರಮ ನಿರೂಪಿಸಿದರು. ಲೋಕನಾಥ ಶೆಟ್ಟಿ ವಂದಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು.