ಕಾಸರಗೋಡು: ಚೆಂಗಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಯರಿಗೆ ಮತ್ತು ಎದೆ ಹಾಲುಣಿಸುವ ತಾಯಂದಿರಿಗಾಗಿ ವೈದ್ಯಕೀಯ ಶಿಬಿರ ಜರುಗಿತು.
ಗರ್ಭಧಾರಣೆಯ ಅವಧಿಯಲ್ಲಿ ಕಂಡುಬರುವ ಸಮಸ್ಯೆಗಳು, ಪೋಷಕಾಹಾರದ ಕೊರತೆ, ತಿಂಗಳಾಗದೆ ನಡೆಯುವ ಹೆರಿಗೆ, ನವಜಾತ ಶಿಶುವಿನ ತೂಗಳತೆ ಕಡಿಮೆಯಾಗಿರುವುದು, ಎದೆ ಹಾಲಿನಕೊರತೆ ಸಹಿತ ಆರೋಗ್ಯ ಸಮಸೆಗಳಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಶಿಬಿರ ನಡೆಯಿತು. ಸಮಾಜನೀತಿ ಇಲಾಖೆ, ಆರೋಗ್ಯ ಇಲಾಖೆಗಳ ಜಂಟಿ ಸಹಕಾರದಿಂದ ಚೆಂಗಳ ಗ್ರಾಮಪಂಚಾಯತ್ ಈ ಶಿಬಿರ ನಡೆಸಿದೆ.
ಅಂಗನವಾಡಿ ಕಾರ್ಯಕರ್ತೆಯರು ಹೈರಿಕ್ ಸಮೂಹದಲ್ಲಿ ಒಳಪಟ್ಟ ಗರ್ಭಿಣಿಯರನ್ನು, ಎದೆಹಾಲುಣಿಸುವ ತಾಯಂದಿರನ್ನು ಪತ್ತೆ ಮಾಡಿ ಶಿಬಿರಕ್ಕೆ ಕರೆತಂದಿದ್ದರು. ನೂರಾರು ಮಂದಿ ಭಾಗವಹಿಸಿದ್ದರು. ಪೋಷಕಾಹಾರವನ್ನು ಅಂಗನವಾಡಿ ಮೂಲಕ ಪೂರೈಸಲಾಗುವುದು ಎಂದು ತಿಳಿಸಲಾಯಿತು.
ಗ್ರಾಮ ಪಂಚಾಯತ್ ಅಭಿವೃದ್ದಿ ಸ್ಥಾಯೀ ಸಮಿತಿ ಅಧ್ಯಕ್ಷ ಅಹಮ್ಮದ್ ಹಾಜಿ ಉದ್ಘಾಟಿಸಿದರು. ವೈದ್ಯಾಧಿಕಾರಿ ಡಾ.ಷಮೀಮಾ ತನ್ ವೀರ್ ಅಧ್ಯಕ್ಷತೆ ವಹಿಸಿದ್ದರು.ಆರೋಗ್ಯ ಇನ್ಸ್ ಪೆಕ್ಟರ್ ಬಿ.ಅಶ್ರಫ್, ಐ.ಸಿ.ಡಿ.ಎಸ್. ಮೇಲ್ವಿಚಾರಕಿ ಕಾವ್ಯಶ್ರೀ, ಸುಲೇಖಾ ಮೊದಲಾದವರು ಉಪಸ್ಥಿತರಿದ್ದರು. ಜೆ.ಪಿ.ಎಚ್.ಎಲ್.ಜಲಜಾ, ಸಾಫ್ ನರ್ಸ್ ಮಾಯಾ, ಅಂಗನವಾಡಿ ವರ್ಕರ್ ಗಳು ಮೊದಲಾದವರು ಶಿಬಿರಕ್ಕೆ ನೇತೃತ್ವ ವಹಿಸಿದ್ದರು.