ನವದೆಹಲಿ: ಸೋಮವಾರದಿಂದ ಆರಂಭವಾಗಲಿರುವ 17 ನೇ ಲೋಕಸಭೆಯ ಮೊದಲ ಅಧಿವೇಶನದ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಭಾನುವಾರ ಸರ್ವ ಪಕ್ಷಗಳ ಸಭೆ ನಡೆಯಿತು.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ, ರಾಜ್ಯಸಭೆಯ ಬಿಜೆಪಿ ನಾಯಕ ಥಾವರ್ ಚಂದ್ ಗೆಹ್ಲೋಟ್, ಸಮಾಜವಾದಿ ಪಕ್ಷದ ಮುಖಂಡರಾದ ರಾಮ್ ಗೋಪಾಲ್ ಯಾದವ್, ಟಿಎಂಸಿಯ ಡೆರೆಕ್ ಒ'ಬ್ರಿಯೆನ್, ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಫಾರೂಖ್ ಅಬ್ದುಲ್ಲಾ, ಎನ್ ಸಿಪಿಯ ಸುಪ್ರಿಯಾ ಸುಳೆ, ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್, ಮತ್ತಿತರರರು ಈ ಸಭೆಯಲ್ಲಿ ಪಾಲ್ಗೊಂಡರು.
ಸರ್ವ ಪಕ್ಷಗಳ ಸಭೆಯ ನಂತರ ಎನ್ ಡಿಎ ನಾಯಕರು ಸಂಜೆ ಸಭೆ ನಡೆಸಿದ್ದು, ಮುಂದಿನ ಅಧಿವೇಶನದಲ್ಲಿ ಚರ್ಚಿಸಬೇಕಾದ ವಿಷಯಗಳ ಕುರಿತಂತೆ ಕಾರ್ಯತಂತ್ರ ರೂಪಿಸಿದರು. ಬಿಜೆಪಿಯ ಕಾರ್ಯಕಾರಿ ಸಭೆ ಸಭೆ ಕೂಡಾ ಇದೇ ವೇಳೆ ನಡೆಯಿತು.
17 ನೇ ಲೋಕಸಭೆಯ ಪ್ರಥಮ ಆಧಿವೇಶನ ಸೋಮವಾರದಿಂದ ಜುಲೈ 26ರವರೆಗೆ ನಡೆಯಲಿದೆ. ಜುಲೈ 5 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ.
ಅಧಿವೇಶದ ಮೊದಲ ಎರಡು ದಿನ ನೂತನ ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜೂನ್ 19 ರಂದು 17ನೇ ಲೋಕಸಭೆಯ ಸ್ಪೀಕರ್ ಹುದ್ದೆಗಾಗಿ ಚುನಾವಣೆ ನಡೆಯಲಿದೆ.