ನವದೆಹಲಿ: ಲೋಕಸಭಾ ಚುನಾವಣೆಯ ನಂತರ ಒಂದು ದೇಶ ಒಂದು ಚುನಾವಣೆ ಬಗ್ಗೆ ಮಾತನಾಡುತ್ತಿದ್ದ ಕೇಂದ್ರ ಸರ್ಕಾರ ಆಹಾರ ಸಂರಕ್ಷಣೆಗಾಗಿ ಒಂದು ದೇಶ ಒಂದೇ ಪಡಿತರ ಚೀಟಿ ಯೋಜನೆ ಬಗ್ಗೆ ಆಸಕ್ತಿ ವಹಿಸಿದೆ ಎಂದು ತಿಳಿದು ಬಂದಿದೆ.
ಸಬ್ಸಿಡಿಯುಕ್ತ ದರದಲ್ಲಿ ಆಹಾರಧಾನ್ಯವನ್ನು ತಡೆಯಿಲ್ಲದೆ ಪೂರೈಸುವ ನಿಟ್ಟಿನಲ್ಲಿ 'ಒನ್ ನೇಷನ್ ಒನ್ ರೇಶನ್ ಕಾರ್ಡ್' ಜಾರಿಗೊಳಿಸುವುದಾಗಿ ಕೇಂದ್ರ ಸರಕಾರ ಹೇಳಿದೆ.
ಈ ಯೋಜನೆಯಿಂದ ಜನ ಕೇವಲ ನ್ಯಾಯಬೆಲೆ ಅಂಗಡಿಯಿಂದ ಮಾತ್ರ ವಸ್ತುಗಳನ್ನು ಖರೀದಿಸುವ ಅವಶ್ಯಕತೆ ಇಲ್ಲ ಹಾಗೂ ಈ ಮೂಲಕ ದೇಶದಾದ್ಯಂತ ಆಹಾರ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ತಡೆಗಟ್ಟಬಹುದು ಎಂದು ಕೇಂದ್ರ ಆಹಾರ ಗ್ರಾಹಕ ವ್ಯವಹಾರ ಮತ್ತು ವಿತರಣಾ ಸಚಿವ ರಾಮ್? ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.
ಬಡಜನತೆ ಉದ್ಯೋಗ ಅಥವಾ ಇನ್ಯಾವುದೇ ಕಾರಣಕ್ಕೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋದಾಗ ನಿರಾತಂಕವಾಗಿ ಆಹಾರ ಧಾನ್ಯ ಪಡೆಯಲು ಸಾಧ್ಯವಾಗುವಂತೆ 'ಒನ್ ನೇಷನ್, ಒನ್ ರೇಷನ್ ಕಾರ್ಡ್' ರೂಪಿಸಲಾಗುತ್ತಿದೆ ಎಂದು ಸರಕಾರ ಹೇಳಿದೆ.
ಕೇಂದ್ರ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅಧ್ಯಕ್ಷತೆಯಲ್ಲಿ ರಾಜ್ಯ ಆಹಾರ ಕಾರ್ಯದರ್ಶಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ತ್ವರಿತ ಜಾರಿಗೆ ಸೂಚಿಸಲಾಗಿದೆ. ಇದರಿಂದ ವಲಸೆ ಕಾರ್ಮಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅವರಿಗೆ ಪೂರ್ಣ ಆಹಾರ ಭದ್ರತೆ ದೊರೆಯಲಿದೆ ಎಂದು ತಿಳಿಸಿದ್ದಾರೆ.
ಈ ಯೋಜನೆಯಿಂದ ಒಬ್ಬ ವ್ಯಕ್ತಿ ಅಥವಾ ಕುಟುಂಬ ವಿವಿಧ ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ರೇಶನ್ ಕಾರ್ಡ್‍ಗಳನ್ನು ಹೊಂದುವ ಅಗತ್ಯವನ್ನು ನಿವಾರಿಸಲಾಗುತ್ತದೆ. ಜತೆಗೆ ದೇಶದ ಬೊಕ್ಕಸಕ್ಕೂ ಉಳಿತಾಯವಾಗುತ್ತದೆ ಎಂದು ತಿಳಿಸಿದ್ದಾರೆ.