HEALTH TIPS

ಗೋಸಂರಕ್ಷಣೆಗೆ ಹಲಸಿನ ಹೊಸ ಆಯಾಮದೊಂದಿಗೆ ನಾಳೆ ಬದಿಯಡ್ಕದಲ್ಲಿ ಹಲಸುಮೇಳ

     
      ಬದಿಯಡ್ಕ: ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವುಗಳ ಉದರಭರಣಕ್ಕಾಗಿ ಸಮಸ್ತ ಗೋಪ್ರೇಮಿಗಳ ಒಂದುಗೂಡುವಿಕೆಯಿಂದ ಜೂನ್ 8ರಂದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ನಡೆಯಲಿರುವ ಹಲಸು ಮೇಳದ ಸಿದ್ಧತೆಗಳು ಅಂತಿಮ ಹಂತದಲ್ಲಿವೆ.
ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಅನುಗ್ರಹದೊಂದಿಗೆ ಮುಳ್ಳೇರಿಯ ಹವ್ಯಕ ಮಂಡಲದ ಶಿಷ್ಯವೃಂದದವರ ನೇತೃತ್ವದಲ್ಲಿ, ಬದಿಯಡ್ಕ ಮಹಿಳೋದಯದ ಸಹಕಾರದೊಂದಿಗೆ ಹಲಸು ಮೇಳವು ನಡೆಯಲಿದೆ. ಮುಳ್ಳೇರಿಯ ಹವ್ಯಕ ಮಂಡಲದ ವಿವಿಧ ವಲಯಗಳ ಶಿಷ್ಯವೃಂದದವರ ಮನೆಗಳಲ್ಲಿ ಹಲಸಿನ ಕಾಯಿ ಹಾಗೂ ಹಣ್ಣುಗಳ ವಿವಿಧ ಉತ್ಪನ್ನಗಳು ಈಗಾಗಲೇ ತಯಾರಾಗಿವೆ. ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರೆ ಮಹನೀಯರ ಸಮರ್ಥವಾದ ಬೆಂಬಲದೊಂದಿಗೆ ಹಲಸಿನ ಮೇಳದ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತಿದೆ. ಸುಮಾರು 75,000ಕ್ಕೂ ಮಿಕ್ಕಿ ಹಲಸಿನ ಹಪ್ಪಳಗಳು ಈಗಾಗಲೇ ತಯಾರಾಗಿವೆ. ವಿವಿಧೆಡೆಗಳಲ್ಲಿ ಇನ್ನೂ ತಯಾರಾಗುತ್ತಿದ್ದು ಅಂತಿಮವಾಗಿ ಒಂದು ಲಕ್ಷಕ್ಕೂ ಹೆಚ್ಚು ಹಪ್ಪಳಗಳು ಮೇಳಕ್ಕಾಗಿ ಸಿದ್ಧಗೊಳ್ಳಲಿದೆ. ಮೇಳದಲ್ಲಿ ಹಲಸಿನ ವಿಧ ವಿಧವಾದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವಿರುತ್ತದೆ.
         ಹಲಸು ಮೇಳದ ಉದ್ದೇಶ:
     ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಶ್ರೀರಾಮಚಂದ್ರಾಪುರ ಮಠದ `ಕಾಮದುಘಾ' ಯೋಜನೆಯ ನೇತೃತ್ವದಲ್ಲಿ ಅನೇಕ ಗೋಶಾಲೆಗಳು ಕಾರ್ಯಾಚರಿಸುತ್ತಿವೆ.
    ದೇಶೀಯ ಗೋತಳಿಗಳಲ್ಲಿ ವಿಶೇಷವಾದ ಕಾಸರಗೋಡು ಗಿಡ್ಡ ತಳಿಯ ಸಂರಕ್ಷಣೆಗಾಗಿ ಬಜಕೂಡ್ಲು ಅಮೃತಧಾರಾ ಗೋಶಾಲೆಯನ್ನು ಸ್ಥಾಪಿಸಲಾಗಿದೆ. ಹಲಸು ಮೇಳದ ಮೂಲಕ ಬರುವ ಆದಾಯವನ್ನು ಇಲ್ಲಿನ ಗೋವುಗಳ ನಿತ್ಯ ಮೇವಿಗಾಗಿ ಉಪಯೋಗಿಸುವುದು ಹಾಗೂ ಹಲಸಿನ ಮೌಲ್ಯವರ್ಧನೆ ಪ್ರಧಾನ ಉದ್ದೇಶವಾಗಿದೆ.
        ಹಪ್ಪಳ ತಯಾರಿ:
   ಪ್ರತೀ ಮನೆಯಿಂದ ಕನಿಷ್ಠ 100 ಹಪ್ಪಳವನ್ನು ಗೋವಿಗಾಗಿ ಸಮರ್ಪಿಸೋಣ ಎಂಬ ಸಂದೇಶದೊಂದಿಗೆ ವಿವಿಧೆಡೆ ಗುಂಪುಗೂಡಿ ಹಪ್ಪಳ ತಯಾರಿಸಲಾಗಿದೆ. ವಿವಿಧ ವಲಯಗಳು ನೇತೃತ್ವವನ್ನು ವಹಿಸಿ ಹಪ್ಪಳ ತಯಾರಿಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದಲೇ ತೊಡಗಿಕೊಂಡಿದ್ದಾರೆ. ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹಪ್ಪಳ ತಯಾರಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಶ್ರೇಷ್ಠ ಗುಣಮಟ್ಟ ಹಾಗೂ ಸಮಾನ ಗಾತ್ರದ ಹಪ್ಪಳಗಳ ತಯಾರಿಗಾಗಿ ಮುತುವರ್ಜಿ ವಹಿಸಿಲಾಗಿದೆ. 6 ಇಂಚು ವ್ಯಾಸದ ಹಪ್ಪಳವನ್ನು ತಯಾರಿಸಿ 3 ದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸಿ, 25 ಹಪ್ಪಳಗಳ ಕಟ್ಟುಗಳನ್ನು ಮಾಡಿ ಮತ್ತೆ 3 ದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸಲಾಗಿದೆ.
        ಹಲಸುಮೇಳದಲ್ಲಿ:
   ಹಲಸಿನ ವಿವಿಧ ಜಾತಿಯ ಗಿಡಗಳ ಪ್ರದರ್ಶನ ಮತ್ತು ಮಾರಾಟವಿರುತ್ತದೆ. ವಿವಿಧ ಉತ್ಪನ್ನಗಳಾದ ಹಪ್ಪಳ, ಐಸ್ ಕ್ರೀಂ, ಜಾಮ್, ಉಂಡಲಕಾಳು, ಹಲಸಿನ ಚಿಪ್ಸ್, ಬೇಳೆಯ ಹೋಳಿಗೆ, ಉಪ್ಪುಸೊಳೆ ಅಲ್ಲದೆ ಮೇಳದಲ್ಲಿ ಬಿಸಿ ಬಿಸಿಯಾದ ಹಲಸಿನ ಕಾಯಿ ದೋಸೆ, ಪಾಯಸ, ಹಲ್ವ, ರೊಟ್ಟಿ, ವಡೆ, ಬಿಸ್ಕಟ್, ಹಲಸಿನ ಹಣ್ಣಿನ ಕೊಟ್ಟಿಗೆ, ಗೆಣಸಲೆ, ಜ್ಯೂಸ್‍ಗಳು, ಉಪ್ಪಿನಕಾಯಿ, ಕೂರ್ಮ, ಪಲ್ಯ, ಪೋಡಿ, ಮಂಚೂರಿ ಹಾಗೂ ಜೇನಿನೊಂದಿಗೆ ಹಲಸಿನ ಹಣ್ಣಿನ ಸೊಳೆ ಲಭ್ಯವಾಗಲಿದೆ.
         ವಿವಿಧ ಸ್ಪರ್ಧೆಗಳು :
   ಹಲಸಿನ ಗಾತ್ರ, ರುಚಿ, ಹಲಸಿನ ವಿವಿಧ ಉತ್ಪನ್ನಗಳ ರುಚಿಯ ಆಧಾರದಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಹಲಸಿನ ಚಿಳ್ಳೆ ಕಟ್ಟುವುದು, ಹಲಸಿನ ಎಲೆಯ ಮೂಡೆಕಟ್ಟುವ ಸ್ಪರ್ಧೆಗಳು ನಡೆಯಲಿರುವುದು. ಅವಶ್ಯವಿರುವ ಹಲಸಿನ ಎಲೆ, ಕಡ್ಡಿಗಳನ್ನು ಸ್ಪರ್ಧಾಳುಗಳೇ ತರಬೇಕಿದ್ದು, ನಿಗದಿತ ಸಮಯದೊಳಗೆ ವಿಜಯಿಯಾದವರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು.
        ವಿಚಾರ ಸಂಕಿರಣ :
   ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ ಮತ್ತು ಮಾರುಕಟ್ಟೆಯ ಬಗ್ಗೆ ಸಿಪಿಸಿಆರ್‍ಐಯ ವಿಜ್ಞಾನಿ ಡಾ. ಸರಿತಾ ಹೆಗ್ಡೆ ಹಾಗೂ ಹಲಸಿನ ಕೃಷಿ ಮತ್ತು ಗೋವಿನ ಆಹಾರ ಎಂಬ ವಿಚಾರದಲ್ಲಿ ವೆಂಕಟಕೃಷ್ಣ ಶರ್ಮ ಮುಳಿಯ ಮಾಹಿತಿಯನ್ನು ನೀಡಲಿದ್ದಾರೆ.
      ಅಭಿಮತ:
    ಗೋಸಂರಕ್ಷಣೆಗೆ ರಾಮಚಂದ್ರಾಪುರ ಮಠವು ಕಂಡುಕೊಂಡ ಹೊಸಹಾದಿ ಹಲಸು.  ಹಲಸಿನ ಬಣ್ಣ ಚಿನ್ನದ್ದು, ಆದರೆ ಚಿನ್ನಕ್ಕಿಲ್ಲದ ರುಚಿ ಹಲಸಿನದ್ದು, ಬಾಯಿಗೆ ರುಚಿ, ದೇಹಕ್ಕೆ ಪುಷ್ಟಿ, ಚಿನ್ನದ ಬಣ್ಣದ ಹಲಸಿನ ಮುಖಾಂತರ ನಿಮ್ಮದು ಚಿನ್ನದ ಬದುಕಾಗಲಿ.
              - ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಶ್ರೀರಾಮಚಂದ್ರಾಪುರ ಮಠ.
..........................................................................................................................................
       ಮುಂದಿನ ದಿನಗಳಲ್ಲಿ ಹಲಸು ಕೃಷಿಯು ಬಹುದೊಡ್ಡ ಆರ್ಥಿಕ ಮೂಲವಾಗಲಿದೆ. ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳು ಆರ್ಥಿಕ ಮೂಲವಾಗಿದ್ದರೆ ಉಳಿದಿರುವುದು ನಮ್ಮ ಗೋವಿಗೆ ಉತ್ತಮ.ಆಹಾರವಾಗಿದೆ. ಎಲ್ಲ ಕೃಷಿಕರು ಹಲಸನ್ನು ತಮ್ಮ ಭೂಮಿಯಲ್ಲಿ ಬೆಳೆಸಬೇಕು.
            - ಶಿವಪ್ರಸಾದ ವರ್ಮುಡಿ, ಅಧ್ಯಕ್ಷರು ಹಲಸುಮೇಳ ಸಮಿತಿ
                   (123 ವಿಧದ ಹಲಸು ತಳಿಯ ಕೃಷಿಕರು)
.............................................................................................................................................
          ಹಲಸಿನ ಕಾಯಿ ಹಣ್ಣು ಎಲ್ಲವೂ ಗೋವಿಗೆ ಶ್ರೇಷ್ಠವಾದ ಪೌಷ್ಟಿಕ ಆಹಾರವಾಗಿದೆ. ಹಲಸಿನ ಬೀಜ ಮತ್ತು ಸೊಳೆಯನ್ನು ನೀಡುವುದರಿಂದ ಹಾಲಿನ ಇಳುವರಿ ಅಧಿಕವಾಗುತ್ತದೆ. ಅತ್ಯಂತ ಕಡಿಮೆ ಖರ್ಚಿನ ಸುಲಭ ಲಭ್ಯದ ಗೋಗ್ರಾಸವಾಗಿದೆ. ಹಲಸನ್ನು ಕೊಳೆತುಹೋಗಲು ಬಿಡದೆ ಗೋವಿನ ಆಹಾರವಾಗಿ ಅದೆಷ್ಟೋ ಕಡೆಗಳಲ್ಲಿ ಈಗಾಗಲೇ ಬಳಸುತ್ತಿದ್ದಾರೆ.
               - ಡಾ. ವೈ.ವಿ.ಕೃಷ್ಣಮೂರ್ತಿ, ಪಶುವೈದ್ಯರು ಬದಿಯಡ್ಕ
                         ಹಲಸುಮೇಳ ಸಂಘಟಕರು
.............................................................................................................................................
          ಹಪ್ಪಳ ತಯಾರಿಯ ಜವಾಬ್ದಾರಿಯನ್ನು ಮಾತೃವಿಭಾಗವು ಯಶಸ್ವಿಯಾಗಿ ನಿಭಾಯಿಸಿರುವುದು ಹೆಮ್ಮೆಪಡುವಂತಾಗಿದೆ. ಯಾರಿಗೂ ಆರ್ಥಿಕ ಹೊರೆಯನ್ನು ಕೊಡದೆ ಅವರ ಸಮಯ ಮತ್ತು ಶ್ರಮವನ್ನು ನೀಡುವ ಇಂತಹ ಚಟುವಟಿಕೆಗಳು ಸಂಘಟನೆಗೆ ಪೂರಕವಾಗಿದೆ.
                 - ಕುಸುಮ ಪೆರ್ಮುಖ, ಮಾತೃಪ್ರಧಾನೆ, ಮುಳ್ಳೇರಿಯಮಂಡಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries