ಉಪ್ಪಳ: ಪವಿತ್ರ ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಸುಭಾಷ್ ಫ್ರೆಂಡ್ಸ್ ಸರ್ಕಲ್ ಲಾಲ್‍ಬಾಗ್ ಪೈವಳಿಕೆ ವತಿಯಿಂದ ಇಫ್ತಾರ್ ಕೂಟ ಸೋಮವಾರಲಾಲ್‍ಭಾಗ್ ನಲ್ಲಿ ನಡೆಯಿತು. ಧರ್ಮ ಸಾಮರಸ್ಯದ ಉದ್ದೇಶದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಸರ್ವಧರ್ಮೀಯರು ಊರ ಪರವೂರ ಗಣ್ಯರು ಪಾಲ್ಗೊಂಡಿದ್ದರು.
ಇಫ್ತಾರ್ ಕೂಟದಲ್ಲಿ ಸುಭಾಷ್ ಗೆಳೆಯರ ಬಳಗ ವೃಂದದ ಗೌರವ ಅಧ್ಯಕ್ಷ ಅಶೋಕ್ ಎಂ.ಸಿ. ಲಾಲ್‍ಭಾಗ್ ಸ್ವಾಗತಿಸಿ ಮಾತನಾಡಿ, ಕ್ಲಬ್ ವತಿಯಿಂದ ನಲುವತ್ತೊಂಬತ್ತನೆ ವರ್ಷದ ಇಫ್ತಾರ್ ಕೂಟವನ್ನು ನಡೆಸುವುತ್ತಿರುವುದರಲ್ಲಿ ಸಂತೋಷವಾಗುತ್ತಿದೆ. ಭವಿಷ್ಯದಲ್ಲೂ ಇದು ಮುಂದುವರಿಯಲಿದ್ದು, ಧರ್ಮ ಬೇಧವಿಲ್ಲದೆ ಎಲ್ಲ ಹಬ್ಬಗಳನ್ನೂ ಸಡಗರದಿಂದ ಆಚರಿಸಲಾಗುವುದು ಎಂದು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಸ್ತಫಾ ಕಡಂಬಾರ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಝಡ್ ಎ. ಕಯ್ಯಾರ್ ರವರು ಇತ್ತೀಚೆಗಿನ ದಿನಗಳಲ್ಲಿ ಕೋಮುವಾದ ಜಾತಿ ಸಮಸ್ಯೆಗಳು ವ್ಯಾಪಕಗೊಳ್ಳುತ್ತಿದೆ. ಆದರೆ ಯಾವುದೇ ಧಾರ್ಮಿಕ ಸಮಸ್ಯೆಗಳನ್ನ ಮುಂದಿಡದೆ ಸೌಹಾರ್ಧತೆಯಿಂದ ಇಫ್ತಾರ್ ಕೂಟ ನಡೆಸುತ್ತಿರುವ ಈ ಗೆಳೆಯರ ವೃಂದ ಇತರೆಡೆಗಳಿಗೆ ಮಾದರಿ ಎಂದು ತಿಳಿಸಿದರು.
ರಾಜಕೀಯ ಮುಖಂಡ ಶಾಂ.ಭಟ್ ಸಾಮಾಜಿಕ ಕಾರ್ಯಕರ್ತ ನಾಸಿರ್ ಕೋರಿಕ್ಕಾರ್, ಸುಭಾಷ್ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಅನಿಲ್ ಶೆಟ್ಟಿ ಲಾಲ್‍ಭಾಗ್, ಕಾರ್ಯದರ್ಶಿ ವಸಂತ್ ನಾಯ್ಕ್ ಲಾಲ್‍ಭಾಗ್ ಪದಾಧಿಕಾರಿಗಳಾದ ಅಶ್ವಥ್ ಪೂಜಾರಿ ಲಾಲ್‍ಭಾಗ್, ರಿಚರ್ಡ್ ಡಿ ಸೋಜ, ಅಜಿತ್ ಎಂ ಸಿ. ಲಾಲ್‍ಭಾಗ್, ಧರ್ಮಸ್ಥಳ ಯೋಜನೆಯ ಮೇಲ್ವಿಚಾರಕ ಅನಿಲ್ ಕುಮಾರ್, ವೆಂಕಪ್ಪ, ಹರೀಶ್ ಚಂದ್ರ, ಸಚ್ಚಿದಾನಂದ ರೈ, ನಾರಾಯಣ ಶೆಟ್ಟಿ, ರಾಘವ ಪೈವಳಿಕೆ, ಖಲೀಲ್ ಚಿಪ್ಪಾರ್, ಶಂಶುದ್ದೀನ್ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ಬಳಿಕ ನೂರಾರು ಜನರು ಭಾಗವಹಿಸಿ ಇಫ್ತಾರ್ ಕೂಟ ನಡೆಯಿತು.