ಕುಂಬಳೆ: ಕೇರಳ ರಾಜ್ಯ ಜಲ ಪ್ರಾಧಿಕಾರಕ್ಕೆ ಹೊಸ ಆದಾಯ ಮಾರ್ಗ ಕಂಡುಕೊಳ್ಳಲು ಬಾಟಲಿ ನೀರು ವಿತರಿಸುವ ವ್ಯವಸ್ಥೆಗೆ ಸರಕಾರವು ಯೋಜನೆ ರೂಪಿಸಿದೆ. ಅದರಂತೆ ಜಲ ಪ್ರಾಧಿಕಾರದ ಬಾಟಲಿ ನೀರನ್ನು ಮುಂದಿನ ಆಗಸ್ಟ್ ತಿಂಗಳಲ್ಲಿ ಮಾರುಕಟ್ಟೆಗಿಳಿಸಲು ನಿರ್ಧರಿಸಲಾಗಿದೆ ಎಂದು ಜಲ ಪ್ರಾಧಿಕಾರವು ತಿಳಿಸಿದೆ.
ಈ ಯೋಜನೆಯನ್ನು ಆರಂಭಿಸುವ ತೀರ್ಮಾನವನ್ನು ಈ ಹಿಂದೆಯೇ ಕೈಗೊಳ್ಳಲಾಗಿತ್ತು. ಆದರೆ ಅದಕ್ಕೆ ಹೊಂದಿಕೊಂಡು ಸ್ಥಾಪಿಸಬೇಕಾಗಿರುವ ಕುಡಿಯುವ ನೀರಿನ ಜಲಾಶಯ ಮತ್ತು ಅದಕ್ಕೆ ಅಗತ್ಯದ ಸರ್ಟಿಫಿಕೇಟ್ ಲಭಿಸುವ ವಿಚಾರದಲ್ಲಿ ವಿಳಂಬ ಉಂಟಾಗಿತ್ತು. ಆದ್ದರಿಂದ ಸಕಾಲದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲು ಸಾಧ್ಯವಾಗಲಿಲ್ಲ ಎಂದು ಜಲ ಪ್ರಾಧಿಕಾರವು ಹೇಳಿದೆ.
ಇದೇ ವೇಳೆ ರಾಜ್ಯದ ಜಲಸಂಪನ್ಮೂಲಗಳಿಗೆ ಪಾಯಿಖಾನೆಗಳ ಮಾಲಿನ್ಯವನ್ನು ಬಿಡುವವರ ಮತ್ತು ಇತರ ಕಾರಣಗಳಿಂದ ನೀರನ್ನು ಮಲಿನಗೊಳಿಸುವವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುವ ನಿರ್ಧಾರವನ್ನು ಪ್ರಾಧಿಕಾರವು ಕೈಗೊಂಡಿದೆ. ಆ ಮೂಲಕ ಜಲಾಶಯಗಳ ನೀರನ್ನು ಶುದ್ಧಗೊಳಿಸಿ ಬಾಟಲಿಗಳಲ್ಲಿ ತುಂಬಿಸಲಾಗುವುದು. ಇತರ ಬಾಟಲಿ ನೀರಿನಿಂದ ಕಡಿಮೆ ದರದಲ್ಲಿ ಜಲ ಪ್ರಾಧಿಕಾರವು ತನ್ನ ಬಾಟಲಿ ನೀರನ್ನು ಮಾರಾಟ ಮಾಡಲು ಉದ್ದೇಶಿಸಿದೆ. ಆ ಮೂಲಕ ನಷ್ಟದ ಹಾದಿಯಲ್ಲಿರುವ ಪ್ರಾಧಿಕಾರಕ್ಕೆ ಆದಾಯ ದೊರಕಿಸುವ ವ್ಯವಸ್ಥೆಗೆ ಸರಕಾರವು ಚಾಲನೆ ನೀಡಿದೆ.
ರಾಜ್ಯದ 14 ಜಿಲ್ಲೆಗಳಲ್ಲಿ ಜಲ ಪ್ರಾಧಿಕಾರವು ತನ್ನ ಬಾಟಲಿ ನೀರನ್ನು ಮಾರುಕಟ್ಟೆಗಿಳಿಸಲು ಯೋಜನೆ ರೂಪಿಸಿದೆ. ಅದರಂತೆ ರಾಜ್ಯಮಟ್ಟದ ಅಧಿಕಾರಿಗಳು ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಥಮ ಸುತ್ತಿನ ಮಾತುಕತೆ ಹಾಗೂ ಸಭೆಗಳನ್ನು ನಡೆಸಿದ್ದಾರೆ. ಅಲ್ಲದೆ ಎಲ್ಲ ಜಿಲ್ಲೆಗಳಲ್ಲೂ ಜಲ ಪ್ರಾಧಿಕಾರದ ಬಾಟಲಿ ನೀರಿಗೆ ಮಾರುಕಟ್ಟೆ ಒದಗಿಸುವ ವ್ಯವಸ್ಥೆಗೆ ಆಯಾ ಜಿಲ್ಲಾ ಮಟ್ಟದ ಅಧಿಕಾರಿಗಳು ಯೋಜನೆ ರೂಪಿಸಬೇಕು ಎಂದು ಜಲ ಪ್ರಾಧಿಕಾರವು ನಿರ್ದೇಶನ ನೀಡಿದೆ.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಲಾಶಯ :
ಬಾಟಲಿ ನೀರಿಗಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಲಾಶಯಗಳನ್ನು ಗುರುತಿಸಲಾಗುವುದು. ಬಳಿಕ ಆ ನೀರನ್ನು ಶುದ್ಧೀಕರಣಗೊಳಿಸಿ ಬಾಟಲಿಗಳಿಗೆ ತುಂಬಿಸಲಾಗುವುದು. ಈ ನಿಟ್ಟಿನಲ್ಲಿ ಜಲಮೂಲಗಳನ್ನು ಹುಡುಕುವ ಕಾರ್ಯ ಮೊದಲಿಗೆ ನಡೆಯಲಿದ್ದು, ಕೆಲವು ಜಿಲ್ಲೆಗಳಲ್ಲಿ ಈ ವ್ಯವಸ್ಥೆ ಪೂರ್ತಿಯಾಗಿದೆ. ಕಾಸರಗೋಡು ಜಿಲ್ಲೆಯಲ್ಲೂ ಜಲಸಂಪನ್ಮೂಲಗಳ ಆಯ್ಕೆ ವಿಚಾರವು ಪ್ರಗತಿಯಲ್ಲಿದೆ.