ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಂಸದೀಯ ನಾಯಕರಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಅಧಿರ್ ರಂಜನ್ ಚೌಧರಿ ಅವರನ್ನು 17ನೇ ಲೋಕಸಭೆಯ ಸಂಸದೀಯ ನಾಯಕನನ್ನಾಗಿ ಮಂಗಳವಾರ ನೇಮಕ ಮಾಡಲಾಗಿದೆ.
ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ರಾಹುಲ್ ಗಾಂಧಿ ಸಹ ಉಪಸ್ಥಿತರಿದ್ದರು.
ಚೌಧರಿ ನೇಮಕದ ಕುರಿತು ಲೋಕಸಭಾ ಸ್ಪೀಕರ್ ಹಾಗೂ ಎಲ್ಲಾ ಪ್ರಮುಖ ಆಯ್ಕೆ ಸಮಿತಿಗಳಿಗೆ ಕಾಂಗ್ರೆಸ್ ಪತ್ರ ಬರೆದಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.
ಚೌಧಿರಿ ಅವರು ಪಶ್ಚಿಮ ಬಂಗಾಳದ ಬೆಹ್ರಾಂಪೊರ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದು, 1999ರಿಂದ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
16ನೇ ಲೋಸಭೆಯಲ್ಲಿ ಮಲ್ಲಿಕಾರ್ಜನ್ ಖರ್ಗೆ ಅವರು ಕಾಂಗ್ರೆಸ್ ಸಂಸದೀಯ ನಾಯಕರಾಗಿ ಕಾರ್ಯನಿರ್ವಹಿಸಿದ್ದರು. ಆದರೆ ಈ ಬಾರಿ ಅವರು ಪರಾಭವಗೊಂಡಿದ್ದರಿಂದ ಆ ಸ್ಥಾನಕ್ಕೆ ಅಧಿರ್ ರಂಜನ್ ಚೌಧರಿ ಅವರನ್ನು ನೇಮಕ ಮಾಡಲಾಗಿದೆ.
ಸಂಸತ್ ಕಾಯ್ದೆ 1977ರ ಪ್ರಕಾರ, ಪ್ರತಿಪಕ್ಷ ನಾಯಕನ ವೇತನ ಮತ್ತು ಭತ್ಯೆಗಳು ಅತಿದೊಡ್ಡ ಪ್ರತಿಪಕ್ಷ ನಾಯಕನಿಗೆ ಲಭ್ಯವಾಗುತ್ತದೆ. ಸದನದ ಒಟ್ಟು ಸದಸ್ಯಬಲದ ಶೇ. 10ರಷ್ಟು ಸ್ಥಾನ ಗಳಿಸಿದ ಪಕ್ಷಕ್ಕೆ ಪ್ರತಿಪಕ್ಷದ ನಾಯಕನ ಸ್ಥಾನ ದೊರೆಯುತ್ತದೆ. ಅಂದರೆ ಪ್ರತಿಪಕ್ಷದ ಸ್ಥಾನಮಾನ ದಕ್ಕಲು ಕನಿಷ್ಠ 55 ಸ್ಥಾನಗಳು ಇರಬೇಕು. ಆದರೆ ಕಾಂಗ್ರೆಸ್ ಸದಸ್ಯ ಬಲ ಕೇವಲ 52 ಆಗಿದೆ.
ಅಧಿಕೃತ ಪ್ರತಿಪಕ್ಷದ ಸ್ಥಾನಕ್ಕೆ ಮೂರು ಸೀಟುಗಳ ಕೊರತೆಯನ್ನು ಕಾಂಗ್ರೆಸ್ ಎದುರಿಸುತ್ತಿದೆ. ಹಾಗಿದ್ದರೂ ಸ್ಪೀಕರ್ ನಿರ್ಧಾರವೇ ಅಂತಿಮವಾಗಿದ್ದು, ಕಾಂಗ್ರೆಸ್‍ಗೆ ಪ್ರತಿಪಕ್ಷ ಸ್ಥಾನ ನೀಡಬಹುದಾಗಿದೆ.