ಮುಳ್ಳೇರಿಯ: ರಕ್ತಗುಂಪು ಹಾಗೂ ವರ್ಗೀಕರಣ ಕಂಡು ಹುಡುಕಿದ ಕಾರ್ಲ್ ಲೇಂಸ್ಟೈನರ್ ಅವರ ಸ್ಮರಣೆಗಾಗಿ ಜೂನ್ 14ರಂದು ಅವರ ಜನ್ಮದಿನವನ್ನು ಜಾಗತಿಕ ರಕ್ತದಾನ ದಿನವಾಗಿ ಆಚರಿಸಲಾಗುತ್ತದೆ ಎಂದು ಸ್ಥಳೀಯ ವೈದ್ಯ ಡಾ.ಮೋಹನದಾಸ್ ಹೇಳಿದರು.
ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶುಕ್ರವಾರ ನಡೆದ ಜಾಗತಿಕ ರಕ್ತದಾನ ದಿನಾಚರಣೆ ಸಮಾರಂಭದಲ್ಲಿ ವೀಡಿಯೋ ಪ್ರಾತ್ಯಕ್ಷಿಕೆಯೊಂದಿಗೆ ತರಗತಿ ನೀಡಿ ಅವರು ಮಾತನಾಡಿದರು.
ವ್ಯಕ್ತಿ ಸ್ವ ಇಚ್ಛೆಯಿಂದ ರಕ್ತ ನೀಡಲು ಮುಂದಾಗುವ ಪ್ರಕ್ರಿಯೆ ರಕ್ತದಾನ. ನಾವು ದಾನ ಮಾಡಿದ ರಕ್ತವು ನಮಗೆ ಪರಿಚಯವೇ ಇಲ್ಲದವರಿಗೂ ಸಲ್ಲುವುದರಿಂದ ರಕ್ತದಾನವು ಅತಿ ಶ್ರೇಷ್ಠ ದಾನಗಳ ಸಾಲಿಗೆ ಸೇರುತ್ತದೆ. ದಾನಿಯು ರಕ್ತದಾನಕ್ಕೆ ಮುಂದಾದಾಗ ಅವರ ದೈಹಿಕ ತಪಾಸಣೆ ನಡೆಸಲಾಗುತ್ತದೆ. ದಾನಿಯ ಆರೋಗ್ಯಕ್ಕೆ ಅಪಾಯ ಇದೆಯೇ ಎಂಬುದನ್ನು ಖಾತರಿ ಪಡಿಸಲು ಆರೋಗ್ಯ ಇತಿಹಾಸದ ಬಗ್ಗೆ ನಿರ್ದಿಷ್ಟ ಪ್ರಶ್ನೆಗಳನ್ನು ಕೇಳಲಾಗುತ್ತದೆ. ದಾನಿಯ ಹಿಮಟೋಕ್ರಿಟ್ ಮತ್ತು ಹಿಮೋಗ್ಲೋಬಿನ್ ಮಟ್ಟವನ್ನು ಪರೀಕ್ಷಿಸಿ ರಕ್ತದಾನ ಮಾಡುವುದರಿಂದ ಅವರು ರಕ್ತಹೀನರಾಗುವ ಸಾಧ್ಯತೆ ಇದೆಯೇ ಎಂಬುದನ್ನೂ ಪತ್ತೆಹಚ್ಚಲಾಗುತ್ತದೆ. ಇದರಿಂದ ರೋಗಿಯು ರಕ್ತ ನೀಡಲು ಅರ್ಹನೋ ಇಲ್ಲವೋ ಎಂಬುದು ತಿಳಿಯುತ್ತದೆ. ರಕ್ತ ದಾನಕ್ಕೆ ಅರ್ಹನಾದ ವ್ಯಕ್ತಿಯಿಂದ ಸಂಗ್ರಹಿಸಲಾಗುವ ರಕ್ತದ ವರ್ಗೀಕರಣ ನಡೆಸಿ ರಕ್ತದ ಆವಶ್ಯಕತೆ ಕಂಡುಬರುವವರಿಗೆ ಪೂರೈಸಲಾಗುತ್ತದೆ. ಅಥವಾ ಬ್ಲಡ್ ಬ್ಯಾಂಕ್‍ಗಳಲ್ಲಿ ಸಂಗ್ರಹಿಸಿ ಇಡಲಾಗುತ್ತಿದ್ದು ತುರ್ತು ಸಂದರ್ಭಗಳಲ್ಲಿ ಅಗತ್ಯ ಕಂಡು ಬಂದವರಿಗೆ ರಕ್ತ ಪೂರೈಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ರಕ್ತದಾನ ಮಾಡುವಾಗ ಮತ್ತು ರಕ್ತ ಪಡೆಯುವಾಗ ಯಾವುದೇ ಜಾತಿ ಧರ್ಮದ ಭೇದ ಭಾವನೆ ಬರುವುದಿಲ್ಲ. ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯಕ್ಕೂ ಲಾಭವಿದೆ. ನಾವು ದಾನ ಮಾಡಿದ ರಕ್ತ ಇನ್ನೊಬ್ಬರ ಜೀವ ಉಳಿಸುವಲ್ಲಿ ಸಹಕಾರಿಯಾಗುತ್ತದೆ ಎಂದರು.
ಶಾಲಾ ನೌಕರ ಸಂಘದ ಕಾರ್ಯದರ್ಶಿ ಮೋಹನ ಮಾಸ್ತರ್, ಬೆಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ದಾದಿ ಶಂಸೀರ, ಶಿಕ್ಷಕರಾದ ಜಿಸನ್, ಜಯರಾಮ ರೈ, ಅಧ್ಯಾಪಿಕೆ ತಂಗಮಣಿ ಉಪಸ್ಥಿತರಿದ್ದರು. ಶಿಕ್ಷಕಿ ಶೋಭಾ ಸ್ವಾಗತಿಸಿ, ಹಿರಿಯ ಶಿಕ್ಷಕ ಕುಂಞÂರಾಮ ಮಣಿಯಾಣಿ ವಂದಿಸಿದರು.