ಮುಳ್ಳೇರಿಯ:ಸಾಹಿತ್ಯದ ಮೂಲಕ ವಿಚಾರಗಳ ಮಂಥನ ಹಾಗೂ ಶಬ್ದಗಳ ಹೂರಣದಿಂದ ಭಾಷೆಯ ಜೀವಂತಿಕೆಯ ಸತ್ವದ ಅನಾವರಣವಾಗುತ್ತದೆ. ಸಾಹಿತ್ಯ ಮನಸ್ಸಿಗೆ ಹಿತ ನೀಡುವುದು. ಆಧುನಿಕ ದೃಶ್ಯ ಮಾದ್ಯಮಗಳು ಎಷ್ಟೇ ಪ್ರಬಲವಾಗಿದ್ದರೂ, ಅಕ್ಷರ ಮಾದ್ಯಮಕ್ಕೆ ಸೋಲಿಲ್ಲ. ವಿಚಾರಗಳನ್ನು ಅರ್ಥ ಮಾಡಿಕೊಳ್ಳಲು ಓದುವುದರಲ್ಲಿನ ಖುಷಿ ನೋಡುವುದರಲ್ಲಿಲ್ಲ ಎಂದು ಸಾಹಿತಿ ವಿರಾಜ್ ಅಡೂರು ಹೇಳಿದರು.
ಅವರು ಕುಂಟಾರಿನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ವಾಚನಾ ವಾರಾಚರಣೆಯ ಅಂಗವಾಗಿ ನಡೆದ ವ್ಯಂಗ್ಯಚಿತ್ರ ಹಾಗೂ ಕವನ ರಚನಾ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಕವನಗಳನ್ನು ಪ್ರಾಸಬದ್ಧತೆಯ ಸಹಜ ಹೊಂದಾಣಿಕೆಯ ಮೂಲಕ ಅರ್ಥವತ್ತಾಗಿ ಬರೆಯಬೇಕು. ಕವನ ರಚನೆಗೆ ವಿಷಯಗಳ ಸಂಗ್ರಹ ಅಗತ್ಯ. ವಿಷಯಗಳ ಸಂಗ್ರಹವು ಓದುವಿಕೆಯಿಂದ ಮಾತ್ರ ಸಾಧ್ಯ. ಮಕ್ಕಳಲ್ಲಿ ಓದುವಿಕೆಯ ಆಸಕ್ತಿಯನ್ನು ಹೆಚ್ಚಿಸಲು ವಾಚನಾ ವಾರಾಚರಣೆ ಪ್ರಯೋಜನಕಾರಿ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ವ್ಯಂಗ್ಯಚಿತ್ರ ರಚನೆಯ ಬಗ್ಗೆಯೂ ಮಕ್ಕಳಿಗೆ ತರಬೇತಿ ನೀಡಲಾಯಿತು. ಜಗದೀಶ್ ಮಾಸ್ತರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಕಾರ್ಯಕ್ರಮದಲ್ಲಿ ಮಾತೃ ಸಂಘದ ಅಧ್ಯಕ್ಷೆ ತಾಹಿರಾ, ಮುಖ್ಯ ಶಿಕ್ಷಕಿ ಪ್ರಶಾಂತ, ಶಿಕ್ಷಕಿಯರಾದ ಆಶಾ, ದಾಕ್ಷಾಯಿಣಿ, ಹಾಜಿರಾ ಮೊದಲಾದವರು ಉಪಸ್ಥಿತರಿದ್ದರು. ನಮಿತಾ ಸ್ವಾಗತಿಸಿ, ಸಮೀಕ್ಷಾ ವಂದಿಸಿದರು. ಶಿಕ್ಷಕಿ ಸುಮಂಗಲಾ ತಂತ್ರಿ ನಿರೂಪಿಸಿದರು. ವಾಚನಾ ವಾರಾಚರಣೆಯಲ್ಲಿ ಸುಮಾರು 50ಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಾಚನಾ ವಾರಾಚರಣೆಯ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ಸ್ಥಳದಲ್ಲೇ ನಡೆದ ವ್ಯಂಗ್ಯಚಿತ್ರ ಹಾಗೂ ಕವನ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.