ಮಂಜೇಶ್ವರ: ಮಳೆಗಾಲದ ಪಿಡುಗುಗಳನ್ನು ನಿಯಂತ್ರಿಸಲು ಮಂಜೇಶ್ವರ ಬ್ಲಾಕ್ ಸಿದ್ಧತೆ ನಡೆಸುತ್ತಿದೆ. ಮಂಜೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಕಡಲ್ಕೊರೆತ ಸಾಧ್ಯತೆಯಿರುವ ಪ್ರದೆಶಗಳಾದ ಉಪ್ಪಳ, ಮುಸೋಡಿ, ಕೊಯಿಪ್ಪಾಡಿ ಗ್ರಾಮ ಕಚೇರಿ ಅಧಿಕಾರಿಗಳಿಗೆ, ಗ್ರಾಮ ಪಂಚಾಯತಿ ಕಾರ್ಯದರ್ಶಿಗಳಿಗೆ ಈ ಸಂಬಂಧ ಜಾಗೃತಿ ಕುರಿತು ಅವಲೋಕನ ಸಭೆ ಶನಿವಾರ ಜರುಗಿತು.
ಮಂಜೇಶ್ವರ ಬ್ಲಾಕ್ ಪಂಚಾಯತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತಹಸೀಲ್ದಾರ್ ಪಿ.ಜೋನ್ ಅಧ್ಯಕ್ಷತೆ ವಹಿಸಿದ್ದರು. ಅಪಾಯಕ್ಕೆ ಕಾರಣವಾಗುವ ಸಾಧ್ಯತೆಗಳಿರುವ ಮರಗಳನ್ನು, ಮರದ ಗೆಲ್ಲುಗಳನ್ನು ಕಡಿಯಲು ಸಭೆ ಆದೇಶ ನೀಡಿದೆ. ತುಂಬ ಹಳತಾಗಿರುವ ಜಾಹೀರಾತು ಫಲಕ ಇತ್ಯಾದಿಗಳನ್ನು ಪರಿಶೀಲಿಸಿ ಗಾಳಿ ಮಳೆಗೆ ಉರಿದು ಬಿದ್ದು ಅಪಾಯಕ್ಕೆ ಸಾಧ್ಯತೆಯಿದೆಯೇ ಎಂದು ಖಚಿತಪಡಿಸಲು ಸಂಬಂಧಪಟ್ಟವರಿಗೆ ಸಭೆ ಆದೇಶ ನೀಡಿದೆ. ಮಳೆಗಾಲದಲ್ಲಿ ತಲೆದೋರಬಹುದಾದ ಅಂಟುರೋಗಗಳ ನಿಯಂತ್ರಣಕ್ಕೆ ಮತ್ತು ಮುಂಜಾಗರೂಕತೆಗೆ ಬೇಕಾದ ಕ್ರಮಕೈಗೊಳ್ಳುವಂತೆ ಆರೋಗ್ಯ ಇಲಾಖೆಗೆ ಜವಾಬ್ದಾರಿ ನೀಡಲಾಗಿದೆ. ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಎಲ್ಲ ಆಸ್ಪತ್ರೆಗಳೂ ಸಿದ್ಧವಾಗಬೇಕು. ತಾಲೂಕಿನಲ್ಲಿ ಸಂಭವಿಸಿದ ಮಳೆಗಾಲದ ಎಲ್ಲ ದುರಂತಗಳ ಬಗ್ಗೆ ಕಾಸರಗೋಡು ತಾಲೂಕು ಕಚೇರಿಯ ನಿಯಂತ್ರಣ ಕೊಠಡಿ(ದೂರವಾಣಿ ಸಂಖ್ಯೆ: 04994-230021.) ಗೆ ಮಾಹಿತಿ ನೀಡಬೇಕು ಎಂದು ಸಭೆ ತಿಳಿಸಿದೆ.
ತಾಲೂಕು ಮಟ್ಟದಲ್ಲಿ ರಚಿಸಲಾದ ಸ್ವಯಂ ಸೇವಾ ಸೇನೆಯಲ್ಲಿ ಸದಸ್ಯರಾಗಲು ಬಯಸುವ ವ್ಯಕ್ತಿಗಳು, ಸಂಘಟನೆಗಳು ತಾಲೂಕು ಕಚೇರಿಯನ್ನು ಸಂಪರ್ಕಿಸಬಹುದು. ಅಪಾಯ ಸಂಭವಿಸುವ ಭೀತಿಯಿರುವ ಪ್ರದೇಶಗಳ ಪಟ್ಟಿ, ತಾತ್ಕಾಲಿಕ ಪುನರ್ವಸತಿ ಕೇಂದ್ರಗಳು, ಸಂರಕ್ಷಣೆ ಸಾಮಾಗ್ರಿಗಳು ಇತ್ಯಾದಿ ಮಹಿತಿಗಳನ್ನು ಗ್ರಾಮಾಧಿಕಾರಿಗಳು ಸಿದ್ಧಪಡಿಸಿದ್ದಾರೆ. ತುರ್ತು ಪರಿಸ್ಥಿತಿಗಳಲ್ಲಿ ಸಾರ್ವಜನಿಕರು ಈ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಪ್ರಕೃತಿ ವಿಕೋಪದಲ್ಲಿ ಮನೆಗೆ ಹಾನಿಯಾದರೆ ಅಂದೇ ವರದಿ ಸಲ್ಲಿಸಲು ಸ್ಥಳೀಯಾಡಳಿತೆ ಇಲಾಖೆ ತಾಂತ್ರಿಕ ವಿಭಾಗ ಸಿಬ್ಬಂದಿಗೆ ಆದೇಶ ನೀಡಿದೆ.
ಸಭೆಯಲ್ಲಿ ಮಂಜೇಶ್ವರ ಬ್ಲಾಕ್ ಬಿ.ಡಿ.ಒ. ಎಂ.ಸುರೇಂದ್ರನ್, ಕಾಸರಗೋಡು ಮೋಟಾರು ವಾಹನ ಇನ್ಸ್ ಪೆಕ್ಟರ್ ಅನ್ವರ್, ಫೈರ್ ಆ್ಯಂಡ್ ರೆಸ್ಕ್ಯೂ ಉಪ್ಪಳ ಸ್ಟೇಷನ್ ಅಧಿಕಾರಿ ಟಿ.ವಿ.ಪ್ರಕಾಶ್ ಕುಮಾರ್, ಮಂಗಲ್ಪಾಡಿ ತಾಲೂಕು ವೈದ್ಯಾಧಿಕಾರಿ ಡಾ.ಸಿ.ವಿ.ಚಂದ್ರಮೋಹನ್, ಮಂಜೇಶ್ವರ ತಾಲೂಕು ವ್ಯಾಪ್ತಿಯ ಗ್ರಾಮಾಧಿಕಾರಿಗಳು, ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗಳು, ತಾಂತ್ರಿಕ ವಿಭಾಗ ಸಿಬ್ಬಂದಿ ಮೊದಲಾದವರು ಉಪಸ್ಥಿತರಿದ್ದರು.