ಬದಿಯಡ್ಕ: ವಿದ್ಯೆ ವಿನಯವನ್ನು ಕೊಡುತ್ತದೆ. ಅಂತಹ ವಿದ್ಯೆಯನ್ನು ಗಳಿಸಬೇಕಾದರೆ ಓದು ಮುಖ್ಯ. ನಿರಂತರವಾದ ಓದು ಬದುಕನ್ನು ಬದಲಿಸಬಲ್ಲದು ಎಂದು ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ವೆಂಕಟರಾಜ ಸಿ ಯಚ್ ಅವರು ಅಭಿಪ್ರಾಯಪಟ್ಟರು.
ಅವರು ವಾಚನಾ ದಿನಾಚರಣೆ ಅಂಗವಾಗಿ ಶಾಲೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ದಿನಾಚರಣೆಯ ಮಹತ್ವದ ಬಗ್ಗೆ ವಿವರಿಸಿ ಮಾತನಾಡಿದರು.
ತಂತ್ರಜ್ಞಾನಗಳು ಎಷ್ಟೇ ವಿಸ್ತರಿಸಿದ್ದರೂ ಪುಸ್ತಕಗಳ ಓದು ನೀಡುವ ಖುಷಿ ಮತ್ತು ತೃಪ್ತಿಯನ್ನು ಬೇರೊಂದು ಒದಗಿಸಲಾರದು. ಈ ಹಿನ್ನೆಲೆಯಲ್ಲಿ ಉತ್ತಮ ಕೃತಿಗಳ ಓದನ್ನು ಎಳವೆಯಿಂದಲೇ ಅಳವಡಿಸುವಲ್ಲಿ ವಿದ್ಯಾರ್ಥಿಗಳು ಆಸಕ್ತರಾಗಬೇಕು ಎಂದು ಅವರು ಈ ಸಂದರ್ಭ ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯ ಅನಾವರಣಕ್ಕೆ ಸಹಾಯಕವಾಗುವ ಮಕ್ಕಳ ಕಥೆ, ಕವನ, ಹಾಡು ಮುಂತಾದವುಗಳ ಹಸ್ತಪತ್ರಿಕೆ 'ಗಾಯತ್ರಿ' ಸಂಚಿಕೆಯನ್ನು ಬಿಡುಗಡೆಗೊಳಿಸಿದರು.