ಬೀಜಿಂಗ್: ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವದ ವಿಚಾರವಾಗಿ ಚೀನಾ ತನ್ನ ವಿರೋಧವನ್ನು ಮುಂದುವರೆಸಿದೆ.
ಎನ್ ಪಿಟಿ ಗೆ ಸಹಿ ಹಾಕಿರುವ ರಾಷ್ಟ್ರಗಳನ್ನು ಮಾತ್ರ ಎನ್ ಎಸ್ ಜಿ ಗೆ ಹೊಸ ಸದಸ್ಯರನ್ನಾಗಿ ಸೇರ್ಪಡೆಗೊಳಿಸಬೇಕೆಂಬ ಬಿಗಿ ಪಟ್ಟನ್ನು ಚೀನಾ ಮುಂದುವರೆಸಿದೆ. ಎನ್ ಪಿಟಿಗೆ ಸಹಿ ಹಾಕದ ರಾಷ್ಟ್ರ ಭಾರತಕ್ಕೆ ಸದಸ್ಯತ್ವ ನೀಡುವುದರ ಬಗ್ಗೆ ಸದಸ್ಯ ರಾಷ್ಟ್ರಗಳ ನಡುವೆ ಚರ್ಚೆ ನಡೆಯಬೇಕು ಎಂದಿರುವ ಚೀನಾ ಒಮ್ಮತ ಮೂಡುವುದಕ್ಕೆ ನಿರ್ದಿಷ್ಟ ಗಡುವಿನ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.
2016 ರ ಮೇ ತಿಂಗಳಿನಿಂದ ಭಾರತ ಎನ್ ಎಸ್ ಜಿ ಸದಸ್ಯತ್ವ ಪಡೆಯಲು ಯತ್ನಿಸುತ್ತಿದೆ. ಆದರೆ ಎನ್ ಪಿಟಿ ಅಂಶವೊಂದನ್ನು ಬಳಸಿಕೊಂಡು ಚೀನಾ ಭಾರತಕ್ಕೆ ಎನ್ ಎ ಸ್ ಜಿ ಸದಸ್ಯತ್ವ ನೀಡಬಾರದೆಂದು ವಾದಿಸುತ್ತಿದೆ.
ಶಾಂಘೈ ಶೃಂಗಸಭೆಯಲ್ಲಿ ಭಾರತ-ಚೀನಾ ನಡುವೆ ಈ ಬಗ್ಗೆ ಚರ್ಚೆ ನಡೆದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಚೀನಾ ವಿದೇಶಾಂಗ ವಕ್ತಾರ ಲೂ ಕಾಂಗ್, ಚೀನಾ ಎನ್ ಪಿಟಿಗೆ ಸಹಿ ಹಾಕದ ರಾಷ್ಟ್ರಗಳ ಕುರಿತು ಎನ್ ಎಸ್ ಜಿ ಸಭೆಯಲ್ಲಿ ಚರ್ಚಿಸುವುದಿಲ್ಲ. ಆದ್ದರಿಂದ ಸಭೆಯಲ್ಲಿ ಭಾರತದ ಬಗ್ಗೆ ಚರ್ಚೆ ನಡೆದಿಲ್ಲ ಎಂದು ತಿಳಿಸಿದ್ದಾರೆ.