ಬೆಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ವಾಣಿಜ್ಯ ಪ್ರೊಫೆಸರ್ ಹಾಗೂ ವಿವಿಯ ಮಾಜಿ ರಿಜಿಸ್ಟ್ರಾರ್ ಆಗಿದ್ದ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತಾಯ ಅವರನ್ನು ನೇಮಿಸಿ ರಾಜ್ಯಪಾಲರಾದ ವಜೂಭಾಯಿ ವಾಲಾ ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ.
ಕಳೆದ ಕೆಲವು ಸಮಯದಿಂದ ವಿವಿಯ ಕುಲಪತಿ ನೇಮಕಕ್ಕೆ ಎದುರಾಗಿದ್ದ ವಿವಾದಕ್ಕೆ ತೆರೆ ಎಳೆದಿರುವ ರಾಜ್ಯಪಾಲರು, ಮೆರಿಟ್, ಸಮಾನತೆ, ಹಾಗೂ ಸಾಮಾಜಿಕ ನ್ಯಾಯವನ್ನು ಗಮನದಲ್ಲಿರಿಸಿಕೊಂಡು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಕಾಯ್ದೆ 2000ದ ಸೆಕ್ಷನ್ 14(4)ರ ಅನುಸಾರ ನೇಮಕಾತಿ ಆದೇಶ ಹೊರಡಿಸಿದ್ದಾರೆ. ಸುಬ್ರಹ್ಮಣ್ಯ ಅವರು ನಾಲ್ಕು ವರ್ಷಗಳ ಅವಧಿಗೆ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
ಕೆಲ ವರ್ಷಗಳಿಂದ ವಿವಿಯ ಕುಲಪತಿ ನೇಮಕ ಗೊಂದಲದ ಗೂಡಾಗಿತ್ತು. 2018ರ ಜೂನ್ 5ರಂದು ದೈಹಿಕ ಶಿಕ್ಷಣ ಇಲಾಖೆಯ ಮುಖ್ಯಸ್ಥ ಡಾ.ಕಿಶೋರ್ ಕುಮಾರ್ ಅವರನ್ನು ವಿವಿಯ ಹಂಗಾಮಿ ಕುಲಪತಿಯಾಗಿ ನೇಮಿಸಲಾಗಿತ್ತು. ಅವರ ಅವಧಿ 2018ರ ನವೆಂಬರ್ 5ರಂದು ಪೂರ್ಣಗೊಂಡ ಹಿನ್ನೆಲೆಯಲ್ಲಿ ನವೆಂಬರ್ 7ರಿಂದ ಜಾರಿಗೆ ಬರುವಂತೆ ವಾಣಿಜ್ಯ ವಿಭಾಗದ ಪ್ರೊ.ಈಶ್ವರ ಪಿ ಅವರನ್ನು ಹಂಗಾಮಿಯಾಗಿ ನೇಮಿಸಿ ಆದೇಶ ಹೊರಡಿಸಲಾಗಿತ್ತು. ಇವರ ಅವಧಿ 2019ರ ಫೆಬ್ರವರಿ 27ರಂದು ಪೂರ್ಣಗೊಂಡಿತ್ತು.
ಬಳಿಕ, ಫೆ.28ರಿಂದ ಪ್ರೊ.ಕಿಶೋರ್ ನಾಯಕ್ ಅವರನ್ನು ವಿವಿಯ ಹಂಗಾಮಿ ಕುಲಪತಿಯಾಗಿ ನೇಮಕ ಮಾಡಲಾಗಿತ್ತಾದರೂ, ಅವರ ಅವಧಿ ಮಾರ್ಚ್ 28ಕ್ಕೆ ಪೂರ್ಣಗೊಂಡಿತ್ತು. ನಂತರ, ಅವರ ಅವಧಿಯನ್ನು ಮೂರು ಬಾರಿ ಒಂದು ತಿಂಗಳ ಮಟ್ಟಿಗೆ ವಿಸ್ತರಿಸಲಾಗಿತ್ತು.
ಮೂಲತಃ ಪುತ್ತೂರಿನವರು:
ಪುತ್ತೂರು ತಾಲೂಕಿನ ಕೌಕ್ರಾಡಿ ಗ್ರಾಮ ಕೊಕ್ಕಡದ ಪಾಲಾಲೆ ಮನೆಯ ಕೆಳ ಮಧ್ಯಮ ವರ್ಗದ ಕೃಷಿಕ ಅರ್ಚಕ ಕುಟುಂಬದಲ್ಲಿ ನಾರಾಯಣ ಯಡಪಡಿತ್ತಾಯ-ಭವಾನಿ ದಂಪತಿಗಳ ಸುಪುತ್ರರಾಗಿ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯರು 1958ರ ಆ.25 ರಂದು ಜನಿಸಿದವರಾಗಿದ್ದಾರೆ.