ಕುಂಬಳೆ: ಕುಂಬಳೆಯಲ್ಲಿ ಕಾರ್ಯಾಚರಿಸುತ್ತಿರುವ ಕಾಲೇಜು ಆಫ್ ಅಪ್ಲೈಡ್ ಸಯನ್ಸ್ ಕಾಲೇಜಿನಲ್ಲಿ ಭಾಷಾ ಅಲ್ಪಸಂಖ್ಯಾತ ಪ್ರದೇಶ ಕಾಸರಗೋಡಿನ ಕನ್ನಡ ವಿದ್ಯಾರ್ಥಿಗಳಿಗೆ ವಿವಿಧ ಕೋರ್ಸ್‍ಗಳಿಗೆ ಮೀಸಲಾತಿ ನೀಡ ಬೇಕೆಂದು ಕನ್ನಡ ಹೋರಾಟ ಸಮಿತಿ ಒತ್ತಾಯಿಸಿದೆ.
ವಿದ್ಯಾಭ್ಯಾಸ ಕ್ಷೇತ್ರದಲ್ಲಿ ಹಿಂದುಳಿದ ಪ್ರದೇಶ ಕಾಸರಗೋಡಿನಲ್ಲಿ ಕನ್ನಡ ಮಾಧ್ಯಮ ಕಲಿತ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡುವ ಮೂಲಕ ಕನ್ನಡಿಗರಿಗೆ ನ್ಯಾಯ ಒದಗಿಸಲು ಸಾಧ್ಯವೆಂದು ಹೋರಾಟ ಸಮಿತಿ ಅಭಿಪ್ರಾಯಪಟ್ಟಿದೆ.
ಮಾನವ ಸಂಪನ್ಮೂಲ ಇಲಾಖೆಯ ಆಶ್ರಯದಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯದ ನೋಂದಣಿಯೊಂದಿಗೆ ಅಪ್ಲೈಡ್ ಸಯನ್ಸ್ ಕಾಲೇಜು ಕಾರ್ಯಾಚರಿಸುತ್ತಿದೆ. ಪ್ರಸ್ತುತ ಸಂಸ್ಥೆಯಲ್ಲಿ ಕಂಪ್ಯೂಟರ್ ಸಯನ್ಸ್ 25, ಇಲೆಕ್ಟ್ರೋನಿಕ್ಸ್ 25 ಹಾಗೂ ಕಂಪ್ಯೂಟರ್ ಎಪ್ಲಿಕೇಶನ್‍ಗೆ 40 ಸೀಟುಗಳು ಲಭ್ಯವಿದೆ. ಆದರೆ ಭಾಷಾ ಅಲ್ಪಸಂಖ್ಯಾತ ಪ್ರದೇಶ ಕಾಸರಗೋಡಿನ ಕನ್ನಡಿಗರಿಗೆ ನ್ಯಾಯಯುತವಾಗಿ ಮೀಸಲಾತಿಯ ಮೂಲಕ ವಿವಿಧ ಸಂಸ್ಥೆಗಳಲ್ಲಿ ಅವಕಾಶವಿದ್ದರೂ ಪ್ರಸ್ತುತ ಕಾಲೇಜಿನಲ್ಲಿ ವಂಚಿತರಾಗುವ ಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿ ವಿಷಯಗಳಿಗೆ ಕನಿಷ್ಠ 5 ಸೀಟುಗಳನ್ನು ಕನ್ನಡ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಬೇಕೆಂದು ಕನ್ನಡ ಹೋರಾಟ ಸಮಿತಿ ಒತ್ತಾಯಿಸಿದೆ.
ಈ ಬಗ್ಗೆ ವಿದ್ಯಾಭ್ಯಾಸ ಸಚಿವ ರವೀಂದ್ರನಾಥ, ಐಎಚ್‍ಆರ್‍ಡಿ ನಿರ್ದೇಶಕರಿಗೆ ಹಾಗು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು. ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದೂ, ತಪ್ಪಿದಲ್ಲಿ ಇಲಾಖೆಯ ಮುಂದೆ ಹೋರಾಟ ನಡೆಸಬೇಕಾದೀತೆಂದು ಕನ್ನಡ ಹೋರಾಟ ಸಮಿತಿಯ ಪದಾಧಿಕಾರಿಗಳು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.