ಮುಳ್ಳೇರಿಯ: ಮಹಿಳಾ ಸ್ವಸಹಾಯ ಸಂಘಗಳಿಗೆ ಮತ್ತು ಕುಟುಂಬಶ್ರೀ ಘಟಕಗಳ ಸದಸ್ಯೆಯರಿಗೆ ನೆರವು ಒದಗಿಸುವ ನಿಟ್ಟಿನಲ್ಲಿ ಕಾರಡ್ಕ ಬ್ಲಾಕ್ ಪಂಚಾಯತಿ ಮಹಿಳಾ ಅಪ್ಯಾರೆಲ್ ಪಾರ್ಕ್ ನಿರ್ಮಿಸುತ್ತಿದೆ.
ಕಾರಡ್ಕ ಬ್ಲಾಕ್ ಪಂಚಾಯತಿ ವ್ಯಾಪ್ತಿಯ ಮುಳಿಯಾರು ಗ್ರಾಮಪಂಚಾಯತಿಯ ಪೊವ್ವಲ್ ಕೋಟೆ ಪರಿಸರದಲ್ಲಿ ಈ ಅಪ್ಯಾರೆಲ್ ಪಾರ್ಕ್ ನಿರ್ಮಾಣಗೊಳ್ಳುತ್ತಿದೆ.
20 ಸೆಂಟ್ಸ್ ಜಾಗದಲ್ಲಿ ಬ್ಲಾಕ್ ಪಂಚಾಯತಿಯ ಯೋಜನೆ ನಿಧಿ ಯಿಂದ 70 ಲಕ್ಷ ರೂ. ವೆಚ್ಚದಲ್ಲಿ ಈ ಪಾರ್ಕ್ ಸಿದ್ಧಗೊಳ್ಳಲಿದೆ.
ಬಹುತೇಕ ಕಡೆಗಳಲ್ಲಿ ಮಹಿಳೆಯರು ನಡೆಸುತ್ತಿರುವ ಸ್ವ ಉದ್ಯೋಗ ಘಟಕಗಳು ಬಾಡಿಗೆ ಕಟ್ಟಡಗಳಲ್ಲಿ ಚಟುಟಿಕೆ ನಡೆಸುತ್ತಿದ್ದು, ಬಾಡಿಗೆ ಇನ್ನಿತರ ವೆಚ್ಚ ರೂಪದಲ್ಲಿ ಭಾರೀ ಪ್ರಮಾಣದ ಮೊಬಲಗು ತೆರಬೇಕಾಗುತ್ತದೆ. ಇದರಿಂದ ಸ್ವ ಉದ್ಯೋಗ ನಡೆಸುವುದೇ ಕಷ್ಟ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ಈ ಸಮಸ್ಯೆಗೆ ಪರಿಹಾರ ರೂಪದಲ್ಲಿ ಅಪಾರಲ್ ಪಾರ್ಕ್ ನಿರ್ಮಾಣಗೊಳ್ಳುತ್ತಿದೆ. ಕಡಿಮೆ ವೆಚ್ಚದಲ್ಲಿ ಕುಟುಂಬಶ್ರೀ ಘಟಕಗಳ ಸದಸ್ಯೆಯರ ಸಹಿತ ಮಹಿಳಾ ಸ್ವ ಉದ್ಯೋಗಿಗಳಿಗೆ ತಮ್ಮ ನೌಕರಿ ಘಟಕಗಳನ್ನು ಆರಂಭಿಸಬಹುದಾಗಿದೆ. ಬ್ಲಾಕ್ ಮಟ್ಟದಲ್ಲಿ ಅರ್ಜಿ ಕೋರಿ ಅರ್ಹರನ್ನು ಆಯ್ದು ಮಿತ ದರದಲ್ಲಿ ಇಲ್ಲಿನ ಕೊಠಡಿಗಳನ್ನು ಬಾಡಿಗೆಗೆ ನೀಡಲಾಗುವುದು.
2500 ಚದರ ಅಡಿಯ ಎರಡಂತಸ್ತಿನ ಕಟ್ಟಡ ನಿರ್ಮಾಣಗೊಳ್ಳಲಿದ್ದು, ಮೊದಲ ಅಂತಸ್ತು ಈಗಾಗಲೇ ಪೂರ್ಣಗೊಂಡಿದೆ. ಟೈಲ್ಸ್ ಹಾಸಲಾದ ನೆಲ, ಶೌಚಾಲಯ ಸಹಿತ ಎಲ್ಲ ಸೌಲಭ್ಯಗಳೂ ಈ ಕಟ್ಟಡದಲ್ಲಿ ವ್ಯವಸ್ಥೆಗೊಳಿಸಲಾಗುತ್ತದೆ.
ಮುಂದಿನ 2 ತಿಂಗಳಲ್ಲಿ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಕಾರಡ್ಕ ಬ್ಲಾಕ್ ಪಂಚಾಯತಿ ಆಡಳಿತ ಸಮಿತಿ ಪದಾಧಿಕಾರಿಗಳು ತಿಳಿಸಿರುವರು. ಈ ಯೋಜನೆಗಳ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸುವ ಯತ್ನ ನಡೆಸಲಾಗುತ್ತಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.