ಕಾಸರಗೋಡು: ಬದುಕನ್ನು ಆಳವಾಗಿ ತಿಳಿದುಕೊಂಡ ಕಾರ್ನಾಡರದು ಜೀವಪರ ಧೋರಣೆಯಾಗಿತ್ತು ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಾಸುಮ ಕೊಡಗು ಅಭಿಪ್ರಾಯಪಟ್ಟರು.
ಕೇರಳ ತುಳು ಅಕಾಡೆಮಿ ಮತ್ತು ಕಾಸರಗೋಡು ಥಿಯಾಟ್ರಿಕ್ಸ್ ಸೊಸೈಟಿ ಜಂಟಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅಪರಾಹ್ನ ನಡೆದ ಜ್ಞಾನಪೀಠ ಪ್ರಶಸ್ತಿ ವಿಜೇತ ರಂಗಕರ್ಮಿ ಗಿರೀಶ್ ಕಾರ್ನಾಡ್ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಸಂಸ್ಮರಣಾ ಭಾಷಣಗೈದು ಮಾತನಾಡಿದರು.
ಚೋಮನದುಡಿ ಕೃತಿಯಲ್ಲಿ ಡಾ.ಶಿವರಾಮ ಕಾರಂತರು ತೋರಿದ್ದು ಜೀವಪರ ಧೋರಣೆಯಾಗಿದೆ. ಇಂಥಾ ಸಿದ್ಧಾಂತಗಳ ಕೃತಿಗಳು ಮರು ಓದಿಗೆ ಪ್ರೇರಣೆಯಾಗುತ್ತವೆ. ಈ ಹಿರಿಮೆಯೇ ಕಾರ್ನಾಡರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಡಲು ಕಾರಣ ಎಂದರು.
ಬದುಕನ್ನು ಸ್ಪಷ್ಟವಾಗಿ ಅರಿತುಕೊಂಡ ಕಾರ್ನಾಡರು ಸಾವನ್ನೂ ಸಂತೋಷದಿಂದ ಅನುಭವಿಸುವ ಮನೋಧರ್ಮ ಹೊಂದಿದ್ದರು. ತಮ್ಮ ಅಂತ್ಯಕ್ರಿಯೆ ಹೀಗೆ ಇರಬೇಕು ಎಂದು ಬಯಸಿದ್ದ ಅವರ ನಿಖರತೆ ಅವರ ಬದುಕಿನ ಆಳತನವನ್ನು ತೋರುತ್ತದೆ. ಅವರು ನಡೆಸಿರುವ ಸಾಧನೆಗಳ ಮೂಲಕ ನಮ್ಮ ಮನಸ್ಸಿನಲ್ಲಿ ಸಾವಿರಾರು ಕಾಲ ಬಾಳುತ್ತಿರುತ್ತಾರೆ ಎಂದು ಅವರು ಈ ಸಂದರ್ಭ ಹೇಳಿದರು. ವ್ಯಕ್ತಿಯೊಬ್ಬರ ಕೆಲವು ಸಿದ್ಧಾಂತಗಳನ್ನು ವಿರೋಧಿಸುವುದು ಬೇರೆ, ವ್ಯಕ್ತಿಯನ್ನೇ ದ್ವೇಷಿಸುವುದು ಬೇರೆ. ಸಿದ್ಧಾಂತಗಳನ್ನು ವಿರೋಧಿಸಿದರೆ ಅದು ಅಷ್ಟಕ್ಕೇ ಸೀಮಿತವಾಗಿರುತ್ತದೆ. ವ್ಯಕ್ತಿಯನ್ನು ದ್ವೇಷಿಸಿದರೆ ಅವರು ಮಾಡಿದ್ದೆಲ್ಲವೂ ತಪ್ಪಾಗಿ ಕಾಣುತ್ತದೆ. ಭಾವ-ಭಾಷೆಗಳು ಮನುಷ್ಯನನ್ನು ಹತ್ತಿರವಾಗಿಸಬೇಕು. ಆದರೆ ಕಾರ್ನಾಡರ ಮಾತುಗಳ ಆಳವನ್ನು ಅರಿಯದೇ ಹೋದುದೇ ಅವರನ್ನು ಕೆಲವರು ವಿರೋಧಿಸಲು ಕಾರಣವಾಗಿತ್ತು. ಮೇಲ್ನೋಟಕ್ಕಷ್ಟೇ ಅವರ ಮಾತುಗಳನ್ನು ಅರಿತುಕೊಂಡವರು ಅವರನ್ನು ದ್ವೇಷಿಸಿದರು ಎಂದು ಅವರು ವಿಶ್ಲೇಶಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ಮಾತನಾಡಿ ಸಮಾಜವನ್ನು ತಿದ್ದುವಲ್ಲಿ ರಂಗಭೂಮಿಯನ್ನು ಮಾಧ್ಯಮವಾಗಿಸಿದ ಕಾರ್ನಾಡರು ಮಾನವ ಸ್ನೇಹಿ ಕಲಾವಿದ. ಅವರ ಹೆಸರನ್ನು ಚಿರಸ್ಥಾಯಿಯಾಗಿಸುವ ನಿರಂತರ ಯೋಜನೆ ಕೇರಳ ತುಳು ಅಕಾಡೆಮಿ ಮತ್ತು ಥಿಯಾಟ್ರಿಕಲ್ ಸೊಸೈಟಿ ಜಾರಿಗೊಳಿಸಲಿದೆ ಎಂದರು.
ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಅಧ್ಯಯನ-ಸಂಶೋಧನೆ ಕೇಂದ್ರದ ಸಂಯೋಜಕ ಡಾ. ರತ್ನಾಕರ ಮಲ್ಲಮೂಲೆ ಅವರು ಮಾತನಾಡಿ, ಕರ್ನಾಡರ ಬದುಕು, ವ್ಯಕ್ತಿತ್ವ, ಸಾಧನೆಗಳು ಭುವನದ ಭಾಗ್ಯ ಎಂದು ವಿಶ್ಲೇಶಿಸಿ ಮಾತನಾಡಿ,ಜಾಗತಿಕ ಮಟ್ಟದಲ್ಲಿ ಕನ್ನಡದ ಮೇರು ವ್ಯಕ್ತಿತ್ವವೊಂದು ಗುರುತಿಸುವಂತಾದುದು ಹೆಮ್ಮೆಯ ವಿಷಯ ಎಂದು ಬಣ್ಣಿಸಿದರು.
ವಿವಿಧ ವಲಯಗಳ ಗಣ್ಯರಾದ ಜಿ.ಬಿ.ವತ್ಸನ್ ಮಾಸ್ತರ್, ದಾಮೋದರನ್, ಪಿ.ವಿ.ಜಯರಾಜನ್, ಟಿ.ವಿ.ಗಂಗಾಧರನ್ ಮೊದಲಾದವರು ಉಪಸ್ಥಿತರಿದ್ದರು. ಕಾಸರಗೋಡು ಪ್ರೆಸ್ ಕ್ಲಬ್ ಅಧ್ಯಕ್ಷ ಟಿ.ಎ.ಶಾಫಿ ಸ್ವಾಗತಿಸಿ, ತುಳು ಅಕಾಡೆಮಿಯ ವಿಜಯಕುಮಾರ್ ಪಾವಳ ವಂದಿಸಿದರು.