ಕಾಸರಗೋಡು: ಭಾಷಾ ಅಲ್ಪಸಂಖ್ಯಾತರಾಗಿರುವ ಕನ್ನಡಿಗರು ಹಲವು ವರ್ಷಗಳಿಂದ ನಿರಂತರವಾಗಿ ಎದುರಿಸುತ್ತಲೇ ಬಂದಿರುವ ವಿವಿಧ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಆಯೋಗವೊಂದನ್ನು ನೇಮಕ ಮಾಡಬೇಕೆಂದು ಶಾಸಕ ಎನ್.ಎ.ನೆಲ್ಲಿಕುನ್ನು ಅವರು ಕೇರಳ ಸರಕಾರವನ್ನು ಆಗ್ರಹಿಸಿದರು.
ರಾಜ್ಯಮಟ್ಟದ ಭಾಷಾ ಅಲ್ಪಸಂಖ್ಯಾಕ ಸಮಿತಿಯಲ್ಲಿ ಕನ್ನಡಿಗರನ್ನು ಪುನ: ಸೇರಿಸಬೇಕು, ಅಂಗನವಾಡಿ ಮೇಲ್ವಿಚಾರಕರಾಗಿ ಕನ್ನಡಿಗರನ್ನೇ ನೇಮಿಸಬೇಕು, ಇದಕ್ಕಾಗಿ ಸರಕಾರ ವಿಶೇಷ ಕಾನೂನು ರೂಪಿಸಬೇಕು, ಮಂಜೇಶ್ವರ ತಾಲೂಕನ್ನು ಭಾಷಾಅಲ್ಪಸಂಖ್ಯಾಕ ತಾಲೂಕೆಂದು ಘೋಷಿಸಬೇಕು, ಕನ್ನಡ ಗುಮಾಸ್ತ ಹುದ್ದೆಗಳನ್ನು ತತ್‍ಕ್ಷಣವೇ ಭರ್ತಿಗೊಳಿಸಬೇಕು ಈ ಮುಂತಾದ ಬೇಡಿಕೆಗಳನ್ನೊಡ್ಡಿ ಕನ್ನಡ ಹೋರಾಟ ಸಮಿತಿ ನೇತೃತ್ವದಲ್ಲಿ ನಗರದ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಶನಿವಾರ ಆಯೋಜಿಸಿದ ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಲಭಿಸಬೇಕು. ಚಪ್ಪರ ನಿರ್ಮಾಣ ಮಾಡಿ ಪದೇ ಪದೇ ಕನ್ನಡಿಗರು ಧರಣಿ ಸತ್ಯಾಗ್ರಹ, ಆಂದೋಲನ ನಡೆಸುವ ಸನ್ನಿವೇಷ ಇನ್ನು ಮುಂದೆ ಬರಬಾರದು. ಈ ನಿಟ್ಟಿನಲ್ಲಿ ಆಯೋಗ ನೇಮಿಸಿ ಕಾಸರಗೋಡಿನ ಕನ್ನಡಿಗರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ ಸರಕಾರವನ್ನು ಒತ್ತಾಯಿಸುವುದಾಗಿ ಅವರು ಹೇಳಿದರು.
ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರಿಗೆ ಸಂವಿಧಾನಬದ್ಧವಾಗಿ ನೀಡಿರುವ ಹಕ್ಕು, ಅವಕಾಶಗಳನ್ನು ಕಸಿದುಕೊಳ್ಳುವುದು ಸಮಂಜಸವಲ್ಲ. ಕಾಸರಗೋಡಿನ ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ನನ್ನ ಜವಾಬ್ದಾರಿಯೂ ಹೌದು. ಈ ಹಿನ್ನೆಲೆಯಲ್ಲಿ ಕನ್ನಡದ ಪರವಾಗಿ ವಿಧಾನಸಭೆಯಲ್ಲೂ, ಹೊರಗೂ ವಾದಿಸುತ್ತೇನೆ. ಭಾಷಾ ಅಲ್ಪಸಂಖ್ಯಾತರಿಗೆ ಸಂವಿಧಾನಬದ್ಧವಾಗಿ ನೀಡಲಾದ ಎಲ್ಲಾ ಹಕ್ಕು ಸವಲತ್ತುಗಳನ್ನು ಹತ್ತಿಕ್ಕುವುದು ಸಂವಿಧಾನದ ಉಲ್ಲಂಘನೆಯಾಗಿದೆ ಎಂದರು.
ಸಾತ್ವಿಕ ಹೋರಾಟ :
ಈ ಹೋರಾಟ ಕನ್ನಡ ಸಂಸ್ಕøತಿಯ ಉಳಿವಿಗಾಗಿ. ಸಂಸ್ಕøತಿ ಎಂದಾಕ್ಷಣ ಭಾಷೆ, ಕಲೆ, ಸಾಹಿತ್ಯ, ಉದ್ಯೋಗ, ಭೌಗೋಳಿಕ ಎಲ್ಲವೂ ಅದರಲ್ಲಡಕವಾಗಿದೆ. ಕಾಸರಗೋಡಿನ ಕನ್ನಡಿಗರ ಹೋರಾಟಕ್ಕೆ ನೈತಿಕವಾದ ಮತ್ತು ಶಾಸನಾತ್ಮಕವಾದ ಶಕ್ತಿ ಇದೆ. ಹೋರಾಟದಲ್ಲಿ ಸಾತ್ವಿಸಿಕ, ರಾಜಸಿಕ, ತಾಮಸಿಕ ಎಂಬ ಮೂರು ವಿಧಾನಗಳಿವೆ. ಕಾಸರಗೋಡು ಕನ್ನಡಿಗರ ಹೋರಾಟ ಸಾತ್ವಿಕ ರೂಪದಲ್ಲಿದೆ ಎಂದು ಹಿರಿಯ ಸಾಹಿತಿ ಡಾ|ರಮಾನಂದ ಬನಾರಿ ಅವರು ಹೇಳಿದರು. ಜನಪ್ರತಿನಿಧಿದಿಗಳು ಕೇವಲ ಜಾತಿ, ಪಂಗಡ, ಪಕ್ಷಕ್ಕೆ ಸೀಮಿತರಲ್ಲ. ಎಲ್ಲರಿಗೂ ಪ್ರತಿನಿಧಿ. ಈ ಹಿನ್ನೆಲೆಯಲ್ಲಿ ಕಾಸರಗೋಡಿನ ಕನ್ನಡಿಗರ ಬೇಡಿಕೆಯನ್ನೂ ಸಾಕಾರಗೊಳಿಸುವ ಜವಾಬ್ದಾರಿ ಜನಪ್ರತಿನಿಧಿಗಳಿಗಿವೆ ಎಂದರು.
ಅಸ್ತಿತ್ವಕ್ಕಾಗಿ ಹೋರಾಟ : ಕಾಸರಗೋಡಿನ ಕನ್ನಡಿಗರ ಹೋರಾಟ ಕೇವಲ ಉದ್ಯೋಗಕ್ಕಾಗಿ ಅಲ್ಲ. ಕನ್ನಡಿಗರ ಅಸ್ತಿತ್ವಕ್ಕಾಗಿ ಹೋರಾಟ ನಡೆಯುತ್ತಿದೆ. ಸರಕಾರದಿಂದ ನಡೆಯುತ್ತಿರುವ ದಬ್ಬಾಳಿಕೆ ನಿಲ್ಲಬೇಕು. ಕನ್ನಡ ಭಾಷೆಯನ್ನಾಡುವವರನ್ನೆಲ್ಲರನ್ನು ರಕ್ಷಿಸಬೇಕೆಂದು ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ಅವರು ಹೇಳಿದರು.
ಸಂವಿಧಾನ ಬದ್ಧ ಹಕ್ಕುಗಳನ್ನು ರಕ್ಷಿಸುವುದು ಸರಕಾರದ ಜವಾಬ್ದಾರಿಯಾಗಿದೆ. ಇನ್ನಾದರೂ ಸರಕಾರ ಕಣ್ಣು ತೆರೆಯಬೇಕೆಂದು ನ್ಯಾಯವಾದಿ ತೋಮಸ್ ಡಿ'ಸೋಜ ಅವರು ಹೇಳಿದರು.
ಧರಣಿ ಸತ್ಯಾಗ್ರಹದಲ್ಲಿ ನ್ಯಾಯವಾದಿ ಸದಾನಂದ ರೈ, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ.ಭಟ್, ರವೀಂದ್ರ ಬಲ್ಲಾಳ್, ಗೋಪಾಲ ಶೆಟ್ಟಿ ಅರಿಬೈಲು, ರಾಜೇಶ್, ತಾರಾನಾಥ ಮಧೂರು, ವಿ.ಬಿ.ಕುಳಮರ್ವ, ಎಂ.ಎಚ್.ಜನಾರ್ಧನ, ಬಿ.ಎಂ.ಆದರ್ಶ್, ವಿಜಯಲಕ್ಷ್ಮಿ, ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳುಕ್ಕುರಾಯ, ವಿ.ಬಿ.ಕುಳಮರ್ವ, ಕೆ.ಎನ್.ಕೃಷ್ಣ ಭಟ್ ಮೊದಲಾದವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಹೋರಾಟ ಸಮಿತಿ ಉಪಾಧ್ಯಕ್ಷ ಮಹಾಲಿಂಗೇಶ್ವರ ಭಟ್ ಅಧ್ಯಕ್ಷತೆ ವಹಿಸಿದರು.
ಧರಣಿಯಲ್ಲಿ ಡಾ.ಯು.ಮಹೇಶ್ವರಿ, ಲಕ್ಷ್ಮಣ ಪ್ರಭು, ವಿಶ್ವನಾಥ ರಾವ್, ನವೀನ್ ಮಾಸ್ತರ್ ಮಾನ್ಯ, ಗೋಪಾಲಕೃಷ್ಣ ಭಟ್, ವಾಮನ ರಾವ್ ಬೇಕಲ್, ಟಿ.ಶಂಕರನಾರಾಯಣ ಭಟ್, ಕುಶಲ ಪಾರೆಕಟ್ಟೆ, ವಿಶ್ವನಾಥ ಮಾಸ್ಟರ್, ಸತ್ಯನಾರಾಯಣ ಕಾಸರಗೋಡು, ವಿನೋದ್, ಶಿವ ಕಾಸರಗೋಡು, ನಾರಾಯಣ ಭಟ್, ಉದಯಚಂದ್ರ, ಬಾಲಕೃಷ್ಣ, ಆದರ್ಶ್ ಪಿ.ಎಂ, ಸುಂದರ ಬಾರಡ್ಕ, ಬೇ.ಸಿ.ಗೋಪಾಲಕೃಷ್ಣ ಭಟ್, ಕಮಲಾಕ್ಷ ಸುವರ್ಣ ಪ್ರಭಾಕರ ನಾೈಕ್, ದಿವಾಕರ ಅಶೋಕನಗರ, ಕೆ.ವಿ.ರಮೇಶ್ ಮೊದಲಾದವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಹಿರಿಯ ನಾಟಕಕಾರ ಗಿರೀಶ್ ಕಾರ್ನಾಡ್ ಮತ್ತು ಡಾ.ಡಿ.ಕೆ.ಚೌಟ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಮಾಸ್ಟರ್ ಕೂಡ್ಲು ವಂದಿಸಿದರು.