ತಿರುವನಂತಪುರ: ಅತ್ಯಾಚಾರ ಆರೋಪದ ಮೇಲೆ ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣ ಅವರ ಪುತ್ರ ಬಿನೋಯ್ ಕೊಡಿಯೇರಿ ಅವರ ವಿರುದ್ಧ ಮುಂಬೈ ಪೊಲೀಸರು ಎ ಐ ಆರ್ ದಾಖಲಿಸಿದ್ದಾರೆ.
ಈ ಹಿಂದೆ ದುಬೈನಲ್ಲಿ ಬಾರ್ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದ ಮುಂಬೈ ಮೂಲದ 33 ವರ್ಷದ ಮಹಿಳೆ ಬಿನೋಯ್ ವಿರುದ್ಧ ಅತ್ಯಾಚಾರ ಹಾಗೂ ಮೋಸ ಮಾಡಿದ ಆರೋಪ ಮಾಡಿದ್ದಾರೆ.
ಬಿನೋಯ್ ತನ್ನನ್ನು ಮದುವೆಯಾಗುವದಾಗಿ ನಂಬಿಸಿ ಎರಡು ವರ್ಷಗಳ ಕಾಲ ನಿರಂತರ ಅತ್ಯಾಚಾರ ಎಸಗಿರುವುದಾಗಿ ಮಹಿಳೆ ಆರೋಪಿಸಿದ್ದಾರೆ.
ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಒಶಿವಾರ ಪೊಲೀಸ್ ಠಾಣೆಯಲ್ಲಿ ಸಿಪಿಎಂ ನಾಯಕನ ಪುತ್ರನ ವಿರುದ್ಧ ಕೇಸ್ ದಾಖಲಿಸಲಾಗಿದೆ.
ತಮ್ಮ ವಿರುದ್ಧದ ಅತ್ಯಾಚಾರ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಬಿನೋಯ್ ಅವರು, ಮಹಿಳೆ ತನ್ನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ. ಈ ಸಂಬಂಧ ನಾನು ಈಗಾಗಲೇ ಮಹಿಳೆ ವಿರುದ್ಧ ಕಣ್ಣೂರ್ ಐಜಿಗೆ ದೂರು ನೀಡಿದ್ದೇನೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಬಿನೋಯ್ ಮಹಿಳೆ ವಿರುದ್ಧ ತಮಗೆ ದೂರು ನೀಡಿರುವುದನ್ನು ಕಣ್ಣೂರ್ ಪೊಲೀಸರು ಖಚಿತಪಡಿಸಿದ್ದಾರೆ. ಅಲ್ಲದೆ ಶೀಘ್ರದಲ್ಲೇ ಮಹಿಳೆ ವಿರುದ್ಧ ಕಣ್ಣೂರ್ ಪೊಲೀಸರು ಎ ಐ ಆರ್ ದಾಖಲಿಸಲಿದ್ದಾರೆ ಎನ್ನಲಾಗಿದೆ.