ಬದಿಯಡ್ಕ: ಸದಾಕಾಲ ನಮ್ಮ ಜೊತೆಯಲ್ಲಿರುವ ಗೆಳೆಯರೆಂದರೆ ಪುಸ್ತಕಗಳು. ದಿನಂಪ್ರತಿ ಹೊಸ ಪುಸ್ತಕಗಳನ್ನು ಓದುವುದರ ಮೂಲಕ ಗೆಳೆತನವನ್ನು ಮಾಡಬೇಕು. ನಮ್ಮ ಸಮಸ್ಯೆಗಳಿಗೆ ಅದು ಉತ್ತರಿಸುತ್ತದೆ. ನಮ್ಮ ಜ್ಞಾನ ಭಂಡಾರ ಹೆಚ್ಚಿಸಲು ಓದು ಸಹಾಯಕ ಎಂದು ಅಧ್ಯಾಪಕ ಕೃಷ್ಣೋಜಿ ರಾವ್ ಪುಂಡೂರು ತಿಳಿಸಿದರು.
ಅವರು ಮವ್ವಾರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ವಾಚನಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಕ್ಕಳಿಗೆ ವಿಶೇಷ ತರಗತಿಯನ್ನು ನಡೆಸಿ ಮಾತನಾಡಿದರು. ಈ ಸಂದರ್ಭ ಅವರು ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ಕಾರ್ಯಕ್ರಮಕ್ಕೆ ಅಧ್ಯಾಪಿಕೆ ಶ್ಯಾಮಲಾ ಕುಮಾರಿ ಶುಭಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶೀಜಾ ಪಿ.ವಿ. ಸ್ವಾಗತಿಸಿ, ಅಧ್ಯಾಪಕ ವಿಘ್ನೇಶ ಶರ್ಮಾ ವಂದಿಸಿದರು.