ಬದಿಯಡ್ಕ: ಏತಡ್ಕದ ಶ್ರೀಸದಾಶಿವ ದೇವಳದಲ್ಲಿ ಕಳೆದ ಸುಮಾರು 50 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಪೂರ್ವ ಸಂಪ್ರದಾಯದಂತೆ ವರ್ಷಕ್ಕೊಮ್ಮೆ ಕಾರ್ತಿಕ ಮಾಸದಲ್ಲಿ ದೇವರಿಗೆ ವಿಶೇಷ ಸೇವೆಯಾಗಿ ಹಲಸಿನ ಹಣ್ಣಿನ ಅಪ್ಪ ಸೇವೆ ಇಂದು(ಜೂ. 30) ಮಧ್ಯಾಹ್ನ ಮಹಾ ಪೂಜೆ ಸಂದರ್ಭದಲ್ಲಿ ನೆರವೇರಲಿದೆ.
ಅಕ್ಕಿ ಹುಡಿ, ತುಪ್ಪ, ತೆಂಗಿನ ಕಾಯಿ, ಬೆಲ್ಲ, ಏಲಕ್ಕಿ, ಹಲಸಿನ ಹಣ್ಣಿನ ಸೊಳೆಗಳ ಪಾಕದಲ್ಲಿ 'ಅಪ್ಪ' ಸಿದ್ಧಗೊಳ್ಳುತ್ತದೆ. ದೇವರ ಸಮ್ಮುಖದಲ್ಲಿ ನಡೆಯುವ ಅಪ್ಪ ಸೇವೆಯ ಸಂದರ್ಭದಲ್ಲಿ ಭಕ್ತಾದಿಗಳು ಹಲಸಿನ ಮಹಿಮೆಯನ್ನು ಕೊಂಡಾಡುತ್ತಾರೆ. ಹಳ್ಳಿಗಳಲ್ಲಿ ಧಾರಾಳ ಲಭ್ಯವಿರುವ ಈ ಫಲ ವಸ್ತುವಿನ ಎಲ್ಲ ಭಾಗಗಳು ನಾನಾ ರೀತಿಯಲ್ಲಿ ಆಹಾರವಾಗಿ ಹಾಗೂ ತರಕಾರಿಯಾಗಿ ಬಳಸಲಾಗುತ್ತದೆ. ಗತ ಕಾಲದಲ್ಲಿ ಆಹಾರ ವಸ್ತುಗಳ ಕೊರತೆ ಅನುಭವಿಸಿದ ಸಂದರ್ಭದಲ್ಲಿ ಹಲಸಿನ ಹಣ್ಣು ತಿಂದು ಹೊಟ್ಟೆ ತುಂಬಿಸುತ್ತಿದ್ದ ಸ್ಮರಣೆಯಿಂದ ಈ ಸೇವೆ ಆಚರಿಸಲ್ಪಡುತ್ತಿದೆ ಎನ್ನುತ್ತಾರೆ ಚಂದ್ರಶೇಖರ ಏತಡ್ಕ ಅವರು.
ಊಟಕ್ಕೆ ತತ್ವಾರ ಉಂಟಾದಾಗ ಮನೆಗೆ ಬಂದ ಅತಿಥಿಗಳಿಗೆ ರುಚಿಯಾದ ಹಣ್ಣಿನ ಸೊಳೆ ನೀಡಿ ಊಟದ ತಟ್ಟೆ ಇಟ್ಟಾಗ ಒಂದಿಷ್ಟು ಗಂಜಿ ಸಾಕಾಗಿ ಮನೆ ಮರ್ಯಾದೆ ಉಳಿದ ಘಟನೆಯನ್ನು ತಾಯಿಯೊಬ್ಬರು ದೇವಸ್ಥಾನದ ನಡೆಯಲ್ಲಿ ನೆನೆಸಿದ್ದಾಗಿ ಅವರು ಹೇಳುತ್ತಾರೆ.
ಹಳ್ಳಿಗಳಲ್ಲಿ ತೀವ್ರ ಬಡತನ ಎದುರಿಸುತ್ತಿದ್ದ ಕಾಲದಲ್ಲಿ ಆಹಾರ ಭದ್ರತೆ ನೀಡಿದ ಹಲಸಿನ ಹಣ್ಣನ್ನು ದೇವರಿಗೆ ಒಪ್ಪಿಸಿ ಕೃತಾರ್ಥತೆ ಹೊಂದುವುದು ರೂಢಿ.
ಅಪ್ಪ ಸೇವೆಯ ಹಿನ್ನೆಲೆ: 1940ರ ಕಾಲಘಟ್ಟದಲ್ಲಿ ಏತಡ್ಕ ಸಮೀಪ ಪಡ್ರೆ ಗ್ರಾಮದ ಸದಾಶಿವ ದೇವಳದ ಮೂಡು ಭಾಗದಲ್ಲಿ ಪ್ರದಕ್ಷಿಣಾಕಾರದಲ್ಲಿ ಹರಿದು ಪಳ್ಳತ್ತಡ್ಕ ಕುಂಬಳೆ ಸೇರುವ ನದಿಯಲ್ಲಿ ಹಿಂದೆಂದೂ ಕಂಡು ಕೇಳರಿಯದ ನೆರೆ ಬಂದು ಸುತ್ತ ಮುತ್ತಲಿನ ಹಲವು ಮನೆಗಳು ಕುಸಿದು ನೆರೆಪಾಲಾದವು. ಅಕ್ಕಪಕ್ಕದ ಕೃಷಿ ಭೂಮಿ ಹೂಳು ತುಂಬಿ ಅಯೋಗ್ಯವಾಗಿ ರೂಪುಗೊಂಡವು. 1941ರಲ್ಲಿ ಏತಡ್ಕ ಸುಬ್ರಾಯ ಭಟ್ ಅವರು ದೇವಸ್ಥಾನವಿರುವ ಸ್ಥಳ ಖರೀದಿಸಿ 1948ರಲ್ಲಿ ಜೀರ್ಣೋದ್ದಾರ, ಬ್ರಹ್ಮಕಲಶ ನೆರವೇರಿಸಿದರು.
ಧನ-ಧಾನ್ಯಗಳೆರಡೂ ದುರ್ಲಭವಾದಾಗ ದಿನದ ಮೂರೂ ಹೊತ್ತು ಹಲಸು ಊರವರ ಹಸಿವು ನೀಗಿಸಿತ್ತು. ಹಸಿವು ನೀಗಿಸಿದ ಹಲಸಿನ ಮರವನ್ನು ಜನರು ಸ್ಮರಿಸಬೇಕು ಹಾಗೂ ಚಿರ ಋಣಿಗಳಾಗಿರಬೇಕು ಎನ್ನುವ ಉದ್ದೇಶದಿಂದ ದಿ. ಏತಡ್ಕ ಸುಬ್ರಾಯ ಭಟ್ ಅವರು ಹಲಸಿನ ಹಣ್ಣಿನ ಅಪ್ಪ ಸೇವೆಯನ್ನು ಆಚರಣೆಗೆ ತಂದಿದ್ದರು. ಆ ಬಳಿಕ ಪ್ರತಿ ವರ್ಷವೂ ತಪ್ಪದೆ ಹಲಸಿನ ಹಣ್ಣಿನ ಅಪ್ಪ ಸೇವೆ ನಡೆಯುತ್ತಿದೆ.