ಕಾಸರಗೋಡು: ಮುಂದಿನ ಜನಾಂಗವಾಗಿರುವ ಇಂದಿನ ಮಕ್ಕಳನ್ನು ಕೌಟುಂಬಿಕ ದೌರ್ಜನ್ಯ ಸಹಿತ ದಬ್ಬಾಳಿಕೆಗಳಿಂದ ಸಂರಕ್ಷಸುವ ನಿಟ್ಟಿನಲ್ಲಿ, ದೌರ್ಜನ್ಯ ತಡೆಯ ಉದ್ದೇಶದಿಂದ ಸಮಾಜವನ್ನು ಜಾಗೃತಗೊಳಸುವ ಉದ್ದೇಶದಿಂದ ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆಯುವ ಸಾಮಾಜಿಕಜಾಗೃತಿ ಕ್ಯಾಂಪೇನ್ ಆರಂಭಗೊಂಡಿದೆ.
ಮಹಿಳಾ ಶಿಶು ಕಲ್ಯಾಣ ಇಲಾಖೆ ವತಿಯಿಂದ ನಡೆಯುವ ಸರಣಿ ಅಂಗವಾಗಿ ವಿಶ್ವ ಪೋಷಕರ ದಿನಾಚರಣೆ ನಡೆಸಲಾಗುವ ಶನಿವಾರ (ಜೂ.1) ಆರಂಭಗೊಂಡಿದ್ದು, ನ.14 ವರೆಗೆ ವೈವಿಧ್ಯಮಯ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ.
ಈ ಸರಣಿಯ ಜಿಲ್ಲಾ ಮಟ್ಟದ ಉದ್ಘಾಟನೆ ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಉದ್ಘಾಟಿಸಿದರು.
ಪ್ರಧಾನ ಭಾಷಣಮಾಡಿದ ಜಿಲ್ಲಾಶಿಶು ಸಂರಕ್ಷಣೆ ಅಧಿಕಾರಿ ಪಿ.ಬಿಜು ಅವರು ಮಾತನಾಡಿ, ಕೂಡು ಕುಟುಂಬದ ಹಿನ್ನೆಲೆ ಮತ್ತು ಇಂದಿನ ಪುಟ್ಟ ಕುಟುಂಬಗಳ ಹಿನ್ನೆಲೆಯಲ್ಲಿ ಬಹು ಅಂತರವಿದ್ದು, ನೂತನ ತಲೆಮಾರನ್ನು ಜಾಗ್ರತೆಯಿಂದ ಪಾಲಿಸುವುದು ದೊಡ್ಡ ಸವಾಲಾಗುತ್ತಿದೆ ಎಂದರು.
ಇಂದು ಮಕ್ಕಳ ಸಂರಕ್ಷಣೆಗೆ 15 ಪ್ರಬಲ ಕಾನೂನು ಅನುಷ್ಠಾನದಲ್ಲಿದೆ. ಇವುಗಳನ್ನು ಅರಿತುಕೊಳ್ಳುವ ಮೂಲಕ ಸಮಾಜ ಕರ್ತವ್ಯದ ಪಾಠ ಮನನ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಚೈಲ್ಡ್ ವೆಲ್ ಫೇರ್ ಸಮಿತಿ ಅರ್ಧಯಕ್ಷೆ,ನ್ಯಾಯವಾದಿ ಪಿ.ಪಿ.ಶ್ಯಾಮಲಾದೇವಿ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾ ಮಹಿಳಾ ಶಿಶು ಅಭಿವೃದ್ದಿ ಅಧಿಕಾರಿ ಡೀನಾಭರತನ್ ಅಧ್ಯಕ್ಷತೆ ವಹಿಸಿದ್ದರು. ಜ್ಯುವೆನೆಲ್ಜಸ್ಟಿಸ್ ಬೋರ್ಡ್ ಸದಸ್ಯ ಬಿ.ಮೋಹನ್ ಕುಮಾರ್, ಡಿ.ಸಿ.ರ್.ಬಿ. ಡಿ.ವೈ.ಎಸ್ಪಿ. ಜೆನ್ಸನ್ ಕೆ.ಅಬ್ರಾಹಂ, ಐ.ಸಿ.ಡಿ.ಎಸ್. ಕಾರ್ಯಕ್ರಮ ಅಧಿಕಾರಿ ಉಷಾ ಕುಮಾರಿ, ಮಹಿಳಾ ಸಂರಕ್ಷಣೆ ಅಧಿಕಾರಿ ಎಸ್.ಪ್ರಮೀಳಾ, ಕಾಸರಗೋಡು ಬ್ಲೋಕ್ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ಪಿ.ಬಿ.ಬಶೀರ್, ಜಿಲ್ಲಾ ಪರಿಶಿಷ್ಟ ಪಂಗಡ ಪ್ರಭಾರ ಅಧಿಕಾರಿ ಎಂ.ಷಮೀನಾ, ಡಿ.ಸಿ.ಪಿ.ಯು.ಸಂರಕ್ಷಣೆ ಅಧಿಕಾರಿ ಎ.ಜಿ.ಫೈಝಲ್ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಏಕದಿನ ಕಾರ್ಯಾಗಾರ ಜರುಗಿತು. ಮಕ್ಕಳ ಹಕ್ಕುಗಳ ಸಂರಕ್ಷಣೆ, ಮಕ್ಕಳ ಮೇಲೆ ಸಾಮಾಜಿಕ ಜಾಲತಾಣಗಳ ಪ್ರಭಾವ, ಮಕ್ಕಳ ಸಂರಕ್ಷಣೆಯಲ್ಲಿ ಹೆತ್ತವರ ಹೊಣೆ ಇತ್ಯಾದಿ ವಿಷಯಗಳಲ್ಲಿ ಪರಿಣತರಾದ ಪಿ.ಸಿ.ವಿಜಯರಾಜನ್,ಪಿ.ಆರ್.ಶ್ರೀನಾಥ್, ವತ್ಸನ್ ಪಿಲಿಕೋಡ್ ಮೊದಲಾದವರು ತರಗತಿ ನಡೆಸಿದರು.
ಮುಖ್ಯಾಂಶ:
ಮಕ್ಕಳ ಸಂರಕ್ಷಣೆ ನಿಟ್ಟಿನಲ್ಲಿ ಹೆತ್ತವರ ಹೊಣೆಗಾರಿಕೆ ಸಂಬಂಧ ಸಲಹೆಗಳು:
1. ಪ್ರೀತಿ ಮತ್ತು ನಿಯಂತ್ರಣವನ್ನು ಏಕರೂಪದಲ್ಲಿ ಹೊಂದಿರುವ ಪೋಷಕರು ಇಂದಿನ ಕಾಲಘಟ್ಟದ ಅನಿವಾರ್ಯತೆ.
2. ಶಿಸ್ತು ಎಂಬುದು ಮಕ್ಕಳ ಸ್ವಾತಂತ್ರ್ಯವನ್ನು ಇಲ್ಲವಾಗಿಸಕೂಡದು. ಅವರ ಸಂರಕ್ಷಣೆ ಕುರಿತು ಬಾಲ್ಯದಿಂದಲೇ ಜಾಗೃತಿ ಮೂಡಿಸುವ ಕಾಯಕ ನಡೆಯಬೇಕು.
3. ದಿನಕ್ಕೆ ಕನಿಷ್ಠ ಒಂದು ತಾಸಾದರೂ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡುವ ಸಮಯವನ್ನು ತಂದೆ-ತಾಯಿ ಒದಗಿಸಬೇಕು. ಈ ಅವಧಿಯಲ್ಲಿ ಟೀವಿ ವೀಕ್ಷಣೆ ಇತ್ಯಾದಿ ನಡೆಸಕೂಡದು.
3. ಮಕ್ಕಳ ಗೆಳೆಯರು ಯಾರು, ಅವರ ಹೆತ್ತವರ ಬಗ್ಗೆ ತಿಳಿದುಕೊಳ್ಳಬೇಕು.
5. ಮಕ್ಕಳ ಮುಂದೆಯೇ ಧೂಮಪಾನ, ಮದ್ಯಪಾನ, ಇನ್ನಿತರ ಮಾದಕ ಪದಾರ್ಥ ಸೇವನೆ ನಡೆಸಕೂಡದು.
6.ಮನೆಯ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವ ನಿಟ್ಟಿನಲ್ಲಿಬಾಲ್ಯದಿಂದಲೇ ಪ್ರಚೋದನೆ ನೀಡುತ್ತಾ ಬರಬೇಕು.
7. ಪರಿಸರ ಶುಚಿತ್ವ, ತ್ಯಾಜ್ಯ ಪರಿಷ್ಕರಣೆ ಇತ್ಯಾದಿ ವಿಚಾರಗಳಲ್ಲಿ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು.
8. ಯೌವನಕ್ಕೆ ಬರುತ್ತಿದ್ದಂತೆ ಮಕ್ಕಳು ಮಾನಸಿಕವಾಗಿ ಅಂತರ ಸಾಧಿಸದೇ ಇರುವಂತೆ ನೋಡಿಕೊಳ್ಳಬೇಕು.