ಕಾಸರಗೋಡು: ಹರಿಕೀರ್ತನೆಗಳು ಧಾರ್ಮಿಕ ಜಾಗೃತಿ ಮತ್ತು ಸಾಂಸ್ಕøತಿಕ ಕಾಳಜಿ ಮೂಡಿಸುವ ಕಲಾಪ್ರಕಾರಗಳು. ಹರಿಕಥಾ ಸತ್ಸಂಗದಿಂದ ಮಾನವನ ಹೃದಯ ಸಂಸ್ಕಾರಗೊಳ್ಳುತ್ತದೆ. ಸಮೃದ್ಧ ಬದುಕಿನ ಹಾದಿ ವಿಕಾಸಗೊಳ್ಳುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟಿದ್ದಾರೆ.
ಗಡಿನಾಡ ನುಡಿದೀವಿಗೆ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಷಷ್ಟ್ಯಬ್ದ ಹರಿಕೀರ್ತನಾ ಅಭಿಯಾನದ ಸಮಾರೋಪ ಸಮಾರಂಭವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ವಸಂತ ಮಹಲ್‍ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಹರಿದಾಸ ಜಯಾನಂದ ಕುಮಾರ್ ಅವರು ಅವನತಿಯ ಅಂಚಿನಲ್ಲಿರುವ ಹರಿಕಥಾ ಪ್ರಕಾರಕ್ಕೆ ಕಾಯಕಲ್ಪ ನೀಡುತ್ತಿರುವವರು. ಶ್ರುತಿ ಮಧುರವಾದ ಗಾಯನ ಮತ್ತು ವ್ಯಾಖ್ಯಾನದ ಮೂಲಕ ಹರಿಕಥಾ ಪರಂಪರೆಗೆ ಮೆರುಗಿನ ಸ್ಥಾನ ಕಲ್ಪಿಸಿದವರು. ಶ್ರೀ ಮಂಜುನಾಥನ ಪೂರ್ಣಾನುಗ್ರಹದಿಂದ ಅವರ ಬದುಕು ಬಂಗಾರವಾಗಲಿ ಎಂದು ಡಾ.ವೀರೇಂದ್ರ ಹೆಗ್ಗಡೆ ನುಡಿದರು.
ಧಾರ್ಮಿಕ ಮುಂದಾಳು, ಕಲಾ ಪೆÇೀಷಕ ಬಿ.ವಸಂತ ಪೈ ಬದಿಯಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಹರಿದಾಸ ಜಯಾನಂದ ಕುಮಾರ್ ಅವರ ಧೀಶಕ್ತಿ ಕ್ರಿಯಾಶಕ್ತಿಯನ್ನು ಶ್ಲಾಘಿಸಿದರು. ಧರ್ಮದರ್ಶಿ ಹರಿಕೃಷ್ಣ ಪುನರೂರು, ಎಂ.ಬಿ.ಪುರಾಣಿಕ್, ಶಾಸಕ ಹರೀಶ್ ಪೂಂಜ, ಪ್ರದೀಪ್ ಕುಮಾರ್ ಕಲ್ಕೂರ, ಕೆ.ಮಹಾಬಲ ಶೆಟ್ಟಿ, ಶಿವರಾಮ ಕಾಸರಗೋಡು ಶುಭಾಶಂಸನೆ ಮಾಡಿದರು. ಕೀರ್ತನಾ ಕೇಸರಿ ರಾಮಕೃಷ್ಣ ಕಾಟುಕುಕ್ಕೆ ಉಪಸ್ಥಿತರಿದ್ದರು.
ಹರಿದಾಸ ಜಯಾನಂದ ಕುಮಾರ್ ಅವರ ಅರುವತ್ತರ ಹುಟ್ಟುಹಬ್ಬದಂಗವಾಗಿ ಆಯೋಜಿಸಿದ ಹರಿಕೀರ್ತನಾ ಅಭಿಯಾನದ ಸಂಚಾಲಕರಾಗಿ ಯಶಸ್ವೀ ಸಾಧನೆ ಮಾಡಿದ ಕಾಸರಗೋಡಿನ ಸಮರ್ಥ ಸಂಘಟಕ ಗುರುಪ್ರಸಾದ್ ಕೋಟೆಕಣಿ ಅವರನ್ನು ಡಾ|ಡಿ.ವೀರೇಂದ್ರ ಹೆಗ್ಗಡೆ ಅವರು ಸಮ್ಮಾನಿಸಿದರು. ಇದೇ ಸಂದರ್ಭದಲ್ಲಿ ಜಯಾನಂದ ಕುಮಾರ್ ದಂಪತಿಗಳನ್ನೂ ಹೆಗ್ಗಡೆಯವರು ಸಮ್ಮಾನಿಸಿದರು. ಹರಿಕಥಾ ಅಭಿಯಾನ ಸಮಿತಿ ಪರವಾಗಿ ಹೆಗ್ಗಡೆಯವರನ್ನು ಗೌರವಿಸಲಾಯಿತು. ವಿವಿಧ ಭಜನಾ ತಂಡಗಳಿಂದ ಗುರುವಂದನೆ ನಡೆಯಿತು.
ಹರಿದಾಸ ಜಯಾನಂದ ಕುಮಾರ್ ಅವರಿಂದ ತರಬೇತಿಗೊಂಡ ಕಾಸರಗೋಡು ಜಿಲ್ಲೆಯ ಹದಿನೈದು ಮಹಿಳಾ ಭಜನಾ ಮಂಡಳಿಯವರಿಂದ ಸಂಕೀರ್ತನೆ ನಡೆಯಿತು. ಡಾ|ಹೆಗ್ಗಡೆ ಮತ್ತು ಸ್ವಾಮೀಜಿದ್ವಯರ ಉಪಸ್ಥಿತಿಯಲ್ಲಿ ಜಯಾನಂದ ಕುಮಾರ್ ಸುಶ್ರಾವ್ಯವಾಗಿ ಹಾಡಿದರು. ಸಭಾ ಕಾರ್ಯಕ್ರಮದಲ್ಲಿ ರವಿ ನಾಯ್ಕಾಪು ಸ್ವಾಗತ ಮಾಡಿದರು. ರಾಧಾಕೃಷ್ಣ ಕೆ.ಉಳಿಯತ್ತಡ್ಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮೀರಾ ಆಳ್ವ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಶೆಟ್ಟಿ ಮಾಡ ವಂದಿಸಿದರು. ಹರಿದಾಸ ಜಯಾನಂದ ಕುಮಾರ್ ಕೃತಜ್ಞತಾ ನುಡಿಗಳನ್ನಾಡಿದರು. ಬಳಿಕ ಅವರಿಂದ `ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ' ಹರಿಕಥೆ ಜರಗಿತು.