ಪಾಟ್ನಾ: ಬಿಹಾರದಲ್ಲಿ ಆಡಳಿತ ನಡೆಸುತ್ತಿರುವ ಹಾಗೂ ಎ ನ್ ಡಿಎ ಮೈತ್ರಿಕ್ಕೂಟದ ಪ್ರಮುಖ ಮೈತ್ರಿ ಪಕ್ಷವಾದ ಜೆಡಿ-ಯು, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ತಲಾಖ್ ಮಸೂದೆಯನ್ನು ವಿರೋಧಿಸಲಿದೆ.
ಜೆಡಿ-ಯು ಪ್ರಧಾನ ಕಾರ್ಯದರ್ಶಿ ಹಾಗೂ ಬಿಹಾರ ಕೈಗಾರಿಕಾ ಸಚಿವ ಶ್ಯಾಮ್ ರಜಾಕ್ ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಂಸತ್ತಿನಲ್ಲಿ ತ್ರಿವಳಿ ತಾಲಾಖ್ ಮಸೂದೆಗೆ ತಮ್ಮ ಪಕ್ಷ ವಿರೋಧಿಸಲಿದೆ. ಈ ಹಿಂದೆಯೂ ಸರ್ಕಾರದ ಇಂತಹ ಪ್ರಯತ್ನಗಳನ್ನು ಜೆಡಿ-ಯು ವಿರೋಧಿಸಿದ್ದು, ಭವಿಷ್ಯದಲ್ಲೂ ಇದೇ ನಿಲುವು ತಳೆಯಲಾಗುವುದು ಎಂದರು.
ಜೆಡಿ-ಯು ವಿರೋಧದ ಕಾರಣದಿಂದಾಗಿಯೇ, ತ್ರಿವಳಿ ತಲಾಖ್ ಗೆ ಸಂಬಂಧಿಸಿದ ಮಸೂದೆ ರಾಜ್ಯಸಭೆಯಲ್ಲಿ ಮಂಡಿಸಲಾಗಿಲ್ಲ ಎಂದು ಅವರು ಹೇಳಿದ್ದಾರೆ.
ತ್ರಿವಳಿ ತಲಾಖ್ ಕುರಿತ ಜೆಡಿ-ಯು ನಿಲುವು ಮೊದಲಿನಿಂದಲೂ ಸ್ಪಷ್ಟವಾಗಿಯೇ ಇದೆ ಎಂದಿರುವ ಅವರು, ತ್ರಿವಳಿ ತಲಾಖ್ ಸಾಮಾಜಿಕ ವಿಷಯವಾಗಿದ್ದರಿಂದ ಸಂಬಂಧಿಸಿದ ಸಮುದಾಯ ಈ ಕುರಿತ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ಈ ವಿಷಯವನ್ನು ಅಲ್ಪಸಂಖ್ಯಾತ ಸಮುದಾಯಕ್ಕೆ ಬಿಡಬೇಕು ಎಂದು ಶ್ಯಾಮ್ ರಜಾಕ್ ಅವರು ಹೇಳಿದ್ದಾರೆ.